ದಾವಣಗೆರೆ, ಜ.12- ರಾಜಕೀಯದ ಮುಂದೆ ಪ್ರಜಾಕೀಯ ವರ್ಕ್ ಆಗಲ್ಲ ಎಂದು ಪ್ರಜಾಕೀಯ ಸ್ಥಾಪನೆ ಮಾಡುವಾಗ ಕೆಲವರು ಹೇಳಿದ್ದರು. ಆದರೆ ಅದನ್ನು ಅರೇಹಳ್ಳಿ ಗ್ರಾಮದ ಮತದಾರರು ಸುಳ್ಳು ಮಾಡಿ, ರಾಜಕೀಯದ ಮುಂದೆ ಪ್ರಜಾಕೀಯವನ್ನು ವರ್ಕ್ ಆಗುವಂತೆ ಮಾಡಿದ್ದಾರೆ ಎಂದು ನಟ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ಪಂಚಾಯತಿ 4ನೇ ವಾರ್ಡ್ ಎಸ್‌ಸಿ ಮೀಸಲು ಕ್ಷೇತ್ರದಿಂದ ಪ್ರಜಾಕೀಯ ತತ್ವ ಸಿದ್ದಾಂತಗಳ ಮೂಲಕ ಜಯ ಗಳಿಸಿದ ಚೇತನ್ ಕುಮಾರ್ ಭೇಟಿಯಾಗಲು ಅರೇಹಳ್ಳಿಗೆ ಉಪೇಂದ್ರ ಆಗಮಿಸಿದ್ದರು. ಅವರನ್ನು ಅಭಿಮಾನಿಗಳು, ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಉಪೇಂದ್ರ ಮಾತನಾಡಿ, ಅರೇಹಳ್ಳಿ ಗ್ರಾಮದ ಜನತೆ ಪ್ರಜಾಕೀಯ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಎಲ್ಲಾ ಹಳ್ಳಿಗಳಿಗೆ ನಿಮ್ಮ ಮಾದರಿಯನ್ನು ಸಾರುವಂತಾಗಬೇಕು. ನೀವು ಗೆಲ್ಲಿಸಿರುವ ಚೇತನ್ ಕುಮಾರ್ ಪ್ರಭುವಲ್ಲ, ಅವರು ನಿಮ್ಮ ಜನ ಸೇವಕ. ಈ ಗೆಲುವು ಪ್ರತಿ ಹಳ್ಳಿಗೂ ಮಾದರಿಯಾಗಬೇಕು ಎಂದ ಅವರು, ಕರ್ನಾಟಕಕ್ಕೆ ನಿಮ್ಮ ಅರೇಹಳ್ಳಿ ಸ್ಫೂರ್ತಿ. ನಾನು ಅರೇಹಳ್ಳಿ ಗ್ರಾಮಸ್ಥರಿಗೆ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು. ಆಗ ಗ್ರಾಮಸ್ಥರು ಉಪೇಂದ್ರ ಅವರಿಗೆ ಬಹುಪರಾಕ್ ಹಾಕಿದರು.
ಹೇಳಿದಂತೆ ಕೆಲಸ ಮಾಡೋರಿಗೆ ಮತ ಹಾಕಬೇಕು. ಇಷ್ಟು ದಿನ ಪಕ್ಷ ನೋಡಿ, ದೊಡ್ಡ ವ್ಯಕ್ತಿ ನೋಡಿ ಮತ ಹಾಕುತ್ತಿದ್ದರು. ಆದರೆ ಈಗ ಅರೇಹಳ್ಳಿ ಗ್ರಾಮಸ್ಥರು ಚೇತನ್ ಕುಮಾರ್ ಅವರ ಸಿದ್ದಾಂತ ನೋಡಿ ಮತ ಹಾಕಿದ್ದಾರೆ. ಗ್ರಾಮಸ್ಥರ ವಿಶ್ವಾಸವನ್ನು ಚೇತನ್ ಕುಮಾರ್ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಪ್ರಜಾಕೀಯ ಸಿದ್ದಾಂತದ ಮೇಲೆ ಗೆದ್ದಿರುವಂತಹ ಅಭ್ಯರ್ಥಿ ಚೇತನ್ ಕುಮಾರ್ ಅವರು ಆರು ತಿಂಗಳಿಗೆ ಒಮ್ಮೆ ತನ್ನ ಕೆಲಸ ಹೇಗೆ ಮಾಡಿದ್ದೇನೆ ಎಂದು ನಿಮ್ಮನ್ನು ಕೇಳುತ್ತಾರೆ. ಹಾಗೇನಾದರೂ ಎರಡು ಬಾರಿ ಕೆಲಸ ಚೆನ್ನಾಗಿ ಮಾಡಿಲ್ಲ ಎಂದರೆ ರಾಜೀನಾಮೆ ಕೊಡುತ್ತಾರೆ ಎಂದರು.