ಬೆಳ್ಳೂಡಿ ಸಮೀಪ ಸಿಡಿಲಿಗೆ 10 ಕುರಿ ಬಲಿ : ಹೊಸಹಳ್ಳಿ, ರಾಮತೀರ್ಥದಲ್ಲಿ ನೆಲಕಚ್ಚಿದ ಜೋಳ

ಮಲೇಬೆನ್ನೂರು, ಜ.9- ನಿನ್ನೆ ಸಂಜೆ ಸುರಿದ ಆಕಾಲಿಕ ಮಳೆ ತೋಟಗಳಿಗೆ ಮತ್ತು ಇನ್ನಿತರೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿದ್ದರೆ, ಇಟ್ಟಿಗೆ ಬಟ್ಟಿ ಮಾಲೀಕರಿಗೆ ತೀವ್ರ ನಷ್ಟ ಮಾಡಿದೆ.

ಬೆಳ್ಳೂಡಿ ಸಮೀಪ ಹೊಲದಲ್ಲಿ ಬೀಡುಬಿ ಟ್ಟಿದ್ದ ಚಿಕ್ಕೋಡಿ ಮೂಲಕ ಕುರಿಗಾಹಿಗಳ 10 ಕುರಿಗಳು ಸಿಡಿಲು ಬಡಿದ ಪರಿಣಾಮ ಸಾವನ್ನ ಪ್ಪಿವೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕುರಿಗಾಹಿಗಳ ಜೀವನ ಅಸ್ತವ್ಯಸ್ತ ಆಗಿರುವುದನ್ನು ಕಣ್ಣಾರೆ ಕಂಡ ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿಯವರು ಅವರನ್ನು ಬೆಳ್ಳೂಡಿ ಮಠಕ್ಕೆ ಕರೆದುಕೊಂಡು ಹೋಗಿ ಊಟ, ಬಟ್ಟೆ ನೀಡಿ ಆಶ್ರಯ ನೀಡಿದರು.

10 ಕುರಿಗಳನ್ನು ಕಳೆದುಕೊಂಡಿರುವ ಕುರಿಗಾಹಿಗಳಿಗೆ ತಕ್ಷಣ ಪರಿಹಾರ ನೀಡುವಂತೆ ಸ್ವಾಮೀಜಿ, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರನ್ನು ಕೇಳಿಕೊಂಡರು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ. ಸದಸ್ಯ ಹದಡಿ ನಿಂಗಪ್ಪ, ಕುಣೆಬೆಳಕೆರೆ ದೇವೇಂದ್ರಪ್ಪ, ಚೂರಿ ಜಗದೀಶ್ ಈ ವೇಳೆ ಹಾಜರಿದ್ದು, ಕುರಿಗಾಹಿಗಳಿಗೆ ನೆರವಾದರು.

ಪಶು ಇಲಾಖೆಯ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ನೆಲಕಚ್ಚಿದ ಜೋಳ : ಹೊಸಹಳ್ಳಿ ಮತ್ತು ರಾಮತೀರ್ಥದಲ್ಲಿ ಸುಮಾರು 50 ಎಕರೆಯಲ್ಲಿ ಬೆಳೆದು ನಿಂತಿದ್ದ ಊಟದ ಜೋಳ ನೆಲಕಚ್ಚಿದ್ದು, ನಷ್ಟ ಸಂಭವಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಗೋವರ್ಧನ್ `ಜನತಾವಾಣಿ’ಗೆ ತಿಳಿಸಿದ್ದಾರೆ. ಈ ಅಕಾಲಿಕ ಮಳೆಯಿಂದ ಜೋಳ, ಕಡ್ಲೆ ಬೆಳೆಗಳಿಗೆ ಹಾನಿ ಮಾಡಿರುವುದನ್ನು ಬಿಟ್ಟರೆ ಒಟ್ಟಾರೆ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಅನುಕೂಲ ಮಾಡಿದೆ ಎಂದು ಗೋವರ್ಧನ್ ಹೇಳಿದರು.

ಎಳೆಹೊಳೆ ಗ್ರಾಮದ ಸರ್ವೇ  ನಂಬರ್‌ ನಲ್ಲಿರುವ ಹೊಳೆಸಿರಿಗೆರೆಯ ಎಂ.ಉಮ್ಮಣ್ಣನವರಿಗೆ ಸೇರಿದ 8 ಎಕರೆ ಕಡ್ಲೆ ಬೆಳೆಗೆ ಹಾನಿ ಆಗಿದೆ ಎಂದು ಉಪತಹಶೀಲ್ದಾರ್ ಆರ್.ರವಿ ತಿಳಿಸಿದ್ದಾರೆ.

ನಂದಿಗುಡಿ, ಗೋವಿನಹಾಳ್, ಕೆ.ಎನ್.ಹಳ್ಳಿ, ಹಿಂಡಸಘಟ್ಟ, ವಾಸನ ಮತ್ತಿತರೆ ಗ್ರಾಮಗಳಲ್ಲಿ ಮಧ್ಯಾಹ್ನದಿಂದಲೇ ಪ್ರಾರಂಭವಾದ ಮಳೆ ರಾತ್ರಿವರೆಗೂ ಸುರಿದಿದೆ.

ಮಲೇಬೆನ್ನೂರು, ಕೊಪ್ಪ, ಹಾಲಿವಾಣ, ಹರಳಹಳ್ಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರೆ, ಜಿಗಳಿ, ಜಿ.ಬೇವಿನಹಳ್ಳಿ, ಕೊಕ್ಕನೂರು, ಹಳ್ಳಿಹಾಳ್, ಯಲವಟ್ಟಿ, ಹೊಳೆಸಿರಿಗೆರೆ, ಭಾನುವಳ್ಳಿ, ಕುಂಬಳೂರು, ನಿಟ್ಟೂರಿನಲ್ಲಿ ಉತ್ತಮ ಮಳೆ ಆಗಿರುವ ಬಗ್ಗೆ ವರದಿಯಾಗಿದೆ. 

ಈ ಮಳೆ ತೋಟಗಳಿಗೆ, ಭತ್ತದ ಸಸಿ ಮಡಿಗೆ ಮತ್ತು ನಾಟಿ ಸಿದ್ದತೆಗೆ ಅನುಕೂಲ ಮಾಡಿಕೊಟ್ಟಿದೆ.

ಹರೀಶ್ ಭೇಟಿ : ಅಕಾಲಿಕ ಮಳೆಯಿಂದ ಹಾನಿಯಾಗಿರುವ ಹಲಸಬಾಳು, ಗುತ್ತೂರು, ಹರಗನಹಳ್ಳಿ ಇಟ್ಟಿಗೆ ಭಟ್ಟಿಗಳಿಗೆ ಮಾಜಿ ಶಾಸಕ ಬಿ.ಪಿ.ಹರೀಶ್ ಭೇಟಿ ನೀಡಿ, ಮಾಲೀಕರಿಗೆ ಧೈರ್ಯ ಹೇಳಿದರು. ಅಲ್ಲದೇ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.

error: Content is protected !!