ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಶ್ರೀಶೈಲ ಜಗದ್ಗುರುಗಳ ಭೇಟಿ

ದಾವಣಗೆರೆ, ಜ. 10 – ನಗರಕ್ಕೆ ಸಮೀಪದ ಬಾಡಾ ಕ್ರಾಸ್ ಬಳಿಯ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ   ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ನಿನ್ನೆ ಭೇಟಿ ನೀಡಿದ್ದರು. 

ಪುಣ್ಯಾಶ್ರಮದ ಆವರಣದಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾ ಮಂಟಪವನ್ನು ಶ್ರೀಗಳು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ನಂತರ ಆಶ್ರಮದಲ್ಲಿರುವ ಶ್ರೀ ಪಂಚಾಕ್ಷರಿ ಗವಾಯಿಗಳ ಹಾಗೂ ಶ್ರೀ ಪುಟ್ಟರಾಜ ಗವಾಯಿಗಳ ಗದ್ದುಗೆಗಳಿಗೆ ತೆರಳಿ ನಮನ ಸಲ್ಲಿಸಿದರು. 

ಆಶ್ರಮದ ವತಿಯಿಂದ ಜಗದ್ಗುರುಗಳಿಗೆ ಪಾದಪೂಜೆ  ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು,  ಅಂಧರ ಬಾಳಿಗೆ ಬೆಳಕಾಗಿದ್ದ ಪುಟ್ಟರಾಜ ಗವಾಯಿಗಳ ಜೀವನ ದರ್ಶನ ಮಾಡಿಸಿದರು.

 ದಾವಣಗೆರೆಯಲ್ಲಿ ತಮ್ಮ ಪುರಪ್ರವೇಶದ ಮೆರವಣಿಗೆ ನಡೆಯುತ್ತಿರುವಾಗ, ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದ ಸುದ್ದಿ ಬಂದಿತು, ತಕ್ಷಣ ತಾವು ಮೆರವಣಿಗೆಯ ರಥದಿಂದ ಕೆಳಗಿಳಿದು, ಪಾದಯಾತ್ರೆಯ ಮೂಲಕವೇ ಶ್ರೀಶೈಲ ಮಠಕ್ಕೆ ತೆರಳಿ, ಪುಟ್ಟರಾಜ ಗವಾಯಿಗಳಿಗೆ ತಾವು ಗೌರವ ಸೂಚಿಸಿದ್ದನ್ನು ಸ್ಮರಿಸಿದರು. 

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಅವರು, ನಗರಪಾಲಿಕೆಯಿಂದ ಶಿಲಾಮಂಟಪದ ನಿರ್ಮಾಣಕ್ಕೆ ಅನುದಾನ ಕೊಡಿಸುವ ಭರವಸೆ ನೀಡಿದರು.

ಆಶ್ರಮದ ಅಂಧ ಮಕ್ಕಳು ಪ್ರಾರ್ಥಿಸಿದರು. ಆಶ್ರಮದ ಕಾರ್ಯದರ್ಶಿ ಎ. ಹೆಚ್. ಶಿವಮೂರ್ತಿಸ್ವಾಮಿ ಅವರು ಸ್ವಾಗತಿಸಿದರು. ಆಶ್ರಮದ ಅಧ್ಯಕ್ಷ ಅಥಣಿ ವೀರಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಶ್ರಮ ನಡೆದು ಬಂದ ದಾರಿಯನ್ನು ವಿವರಿಸಿದರು. ಕಾರ್ಯಕ್ರಮವನ್ನು ಶಿವಬಸಯ್ಯ ನಿರೂಪಿಸಿದರು. ಚನ್ನವೀರಯ್ಯ ವಂದಿಸಿದರು.

ಕಾರ್ಯಕ್ರಮದಲ್ಲಿ ಜೆ. ಎನ್. ಕರಿಬಸಪ್ಪ, ಪಂಚಾಕ್ಷರಿ, ಬಸವನಗೌಡ, ಕರಿಬಸಪ್ಪ, ಬಸವರಾಜ, ಸಿದ್ದಲಿಂಗೇಶ್, ಬಕ್ಕೇಶ್ ನಾಗನೂರು, ಬನ್ನಯ್ಯಸ್ವಾಮಿ,  ಅಮರಯ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!