ದಾವಣಗೆರೆ, ಜ. 8- ಸಹಕಾರಿ ಸಂಘವೊಂದು ಕೋಟ್ಯಾಂತರ ರೂ. ಮೌಲ್ಯದ ಸ್ವಂತ ಕಟ್ಟಡ ಹೊಂದಿ ಪ್ರಗತಿಯ ಮುಂಚೂಣಿಯಲ್ಲಿರುವ ಏಕೈಕ ಸಹಕಾರಿ ಎಂಬ ಹೆಗ್ಗಳಿಕೆಗೆ ನಗರದ ಕರಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಪಾತ್ರವಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕರೂ ಆಗಿರುವ ಸಂಘದ ಅಧ್ಯಕ್ಷ ಸಿಎ ಉಮೇಶ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಘದ ನೂತನ ಕಟ್ಟಡದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಸಹಕಾರಿಯ 2019-20ನೇ ಸಾಲಿನ 20ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಂದುವಾಡ ರಸ್ತೆಯಲ್ಲಿ ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ವಿಶಾಲವಾಗಿ ತನ್ನ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡಿರುವ ಕರಾವಳಿ ಸೊಸೈಟಿಯು ವರದಿ ಸಾಲಿನಲ್ಲೇ ಉದ್ಘಾಟನೆಯನ್ನೂ ನೆರವೇರಿಸಿಕೊಂಡಿದೆ. ಈ ಸಾಧನೆಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಉಮೇಶ್ ಶೆಟ್ಟಿ ಹರ್ಷಿಸಿದರು.
2020ರ ಮಾರ್ಚ್ ಅಂತ್ಯಕ್ಕೆ ಸಹಕಾರಿಯು 14.35 ಲಕ್ಷ ರೂ. ಸವಕಳಿ ಕಳೆದು 52 ಲಕ್ಷ ರೂ. ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ. 14ರಂತೆ ಲಾಭಾಂಶ ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಅವರು ಸಭಿಕರ ಚಪ್ಪಾಳೆಗಳ ಮಧ್ಯ ಘೋಷಿಸಿದರು.
ಸಹಕಾರಿಯ ಸ್ವಂತ ನಿಧಿ 6.78 ಕೋಟಿ ರೂ.ಗಳಾಗಿದ್ದು, 23.21 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ ವಿವಿಧ ಉದ್ದೇಶಗಳಿಗಾಗಿ 19.19 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿದೆ. ಅಲ್ಲದೇ, ಸಂಘದ ನೌಕರರಿಗೆ ಇಎಸ್ಐ ಮತ್ತು ಗ್ಯಾಚ್ಯೂಟಿ ಸೌಲಭ್ಯ ಕಲ್ಪಿಸಲಾಗಿದೆ. ವರದಿ ಸಾಲಿನಲ್ಲಿ ನಿಧನರಾದ ಇಬ್ಬರು ಸದಸ್ಯರ ಕುಟುಂಬಕ್ಕೆ 10 ಸಾವಿರ ರೂ.ಗಳನ್ನು ಮರಣೋತ್ತರ ಪರಿಹಾರ ನೀಡಲಾಗಿದೆ ಎಂದು ಅವರು ಸಂಘದ ಪ್ರಗತಿಯ ಪಕ್ಷಿನೋಟವನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು.
ಸಹಕಾರಿಯ ಸದಸ್ಯರು, ಗ್ರಾಹಕರ ಪ್ರೀತಿ-ನಂಬಿಕೆ-ವಿಶ್ವಾಸ, ಸಿಬ್ಬಂದಿ ವರ್ಗ – ಪಿಗ್ಮಿ ಸಂಗ್ರಹಕಾರರ ಪರಿಶ್ರಮ, ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಇಚ್ಛಾಶಕ್ತಿಯಿಂದಾಗಿ ತಮ್ಮ ಸಂಘವು ಪ್ರಗತಿಯಲ್ಲಿದೆ ಎಂದು ತಿಳಿಸಿದ ಉಮೇಶ್ ಶೆಟ್ಟಿ ಅವರು, ಇದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಿಸುವ ಯೋಜನೆಯಡಿಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿ ಸಿದ ವಿದ್ಯಾರ್ಥಿಗಳಿಗೆ ತಲಾ 2,500 ರೂ.ಗಳ ಪ್ರೋತ್ಸಾಹ ಧನವನ್ನು ಸಮಾರಂಭದಲ್ಲಿ ನೀಡುವುದರ ಮೂಲಕ ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ, ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾಗಿ ಈಚೆಗೆ ನೇಮಕಗೊಂಡಿರುವ ಸಂಘದ ಈ ಹಿಂದಿನ ಲೆಕ್ಕ ಪರಿಶೋಧಕರಾದ ಸಿಎ ಕಿರಣ್ಕುಮಾರ್ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಮಹೇಶ್ ಆರ್. ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರೂ ಆಗಿರುವ ಸಂಘದ ಹಿರಿಯ ನಿರ್ದೇಶಕ ದಿನೇಶ್ ಕೆ. ಶೆಟ್ಟಿ, ನಿರ್ದೇಶಕರುಗಳಾದ ರವೀಂದ್ರ ಎಸ್. ಶೆಟ್ಟಿ, ಎಸ್. ಸೀತಾರಾಂ ಶೆಟ್ಟಿ, ಕೆ. ಮೋಹನ್ದಾಸ್ ಶೆಟ್ಟಿ, ಡಾ. ಸುಬೋದ್ ಎಸ್. ಶೆಟ್ಟಿ, ಶ್ರೀಮತಿ ಆಶಾ ಕೆ. ಶೆಟ್ಟಿ, ಶ್ರೀಮತಿ ವಿಮಲಾ ಎಸ್.ಶೆಟ್ಟಿ, ಹೆಚ್.ಎಲ್. ವೆಂಕಟೇಶ್, ವಿಶೇಷ ಆಹ್ವಾನಿತರಾದ ಬಿ. ಸದಾಶಿವ ಶೆಟ್ಟಿ, ಡಾ. ಸುರೇಶ್ ಶೆಟ್ಟಿ, ಅರುಣ ಕುಮಾರ್ ಶೆಟ್ಟಿ, ಎಂ. ಪ್ರಭಾಕರ ಶೆಟ್ಟಿ, ಕಿಷನ್ ಚಂದ್ರ ಶೆಟ್ಟಿ ಮುಂತಾದವರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಕಾರಿಯ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಖಲೀಲ್ ಅಹ್ಮದ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.