ಹರ ಜಾತ್ರೆ ವೈಚಾರಿಕ ವಿಚಾರ ಜಾತ್ರೆಯಾಗಲಿದೆ

ಹರಪನಹಳ್ಳಿ ಸಭೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ

ಹರಪನಹಳ್ಳಿ, ಜ.6- 2ಎ ಮೀಸಲಾತಿ ದೊರಕಿಸಿಕೊಳ್ಳುವ  ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಹರಿಹರ ಹಾಗೂ ಕೂಡಲ ಸಂಗಮ ಎರಡೂ ಪೀಠಗಳ ಉದ್ದೇಶವೂ ಒಂದೇ ಆಗಿದ್ದು, ಹೋರಾಟದ ವಿಧಾನ ಮಾತ್ರ ಬೇರೆ ಯಾಗಿವೆ ಎಂದು ವೀರಶೈವ ಲಿಂಗಾಯುತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಸಮಾಜದ ಮುಖಂಡ ಮಂಜುನಾಥ ಪೂಜಾರ ಅವರ ನಿವಾಸದಲ್ಲಿ ಜರುಗಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. 2ಎ ಮೀಸಲಾತಿಗೆ ಮೊದಲು ಕುಲಶಾಸ್ತ್ರ ಅಧ್ಯಯನ ಆಗಬೇಕು. ಅಧ್ಯಯನ ನಡೆಸುವ ಸಂಬಂಧ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು. 

ಇದೇ ದಿನಾಂಕ 14 ಮತ್ತು 15 ರಂದು ಹರಿಹರ ಪಂಚಮಸಾಲಿ  ಪೀಠದಲ್ಲಿ ಹರ ಜಾತ್ರೆ ಆಯೋಜಿಸಿದ್ದೇವೆ. ಇದು ವೈಚಾರಿಕ ವಿಚಾರವುಳ್ಳ ಹರ ಜಾತ್ರೆ ಆಗಲಿದೆ.  ಜಾತ್ರೆಯಲ್ಲಿ ಹರದ್ವಾರವನ್ನು ತುಮಕೂರಿನ ಸಿದ್ದಗಂಗಾ ಸ್ವಾಮೀಜಿ ಉದ್ಘಾಟಿಸುವರು ಎಂದರು.

ಭೂ ತಪಸ್ವಿ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದು, ಸ್ವಾವಲಂಬಿ ಭಾರತ ಕಾರ್ಯಕ್ರಮದಲ್ಲಿ ಉಪಮುಖ್ಯ ಮಂತ್ರಿ ಗಳು, ಕೇಂದ್ರ ಸಚಿವರು, ಮಹಾರಾಷ್ಟ್ರ ವಿಪಕ್ಷ ನಾಯಕರು, ಭಾಗವಹಿಸುವರು. ಯುವ ರತ್ನ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಅಖಿಲ ಭಾರತ ಯುವ ಕಾಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ, ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ತುಂಗಭದ್ರಾ ನದಿಯನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ವಿವೇಕಾನಂದ ಜಯಂತಿ ದಿನ  ನದಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತೇವೆ ಎಂದರು.

ಹರ ಜಾತ್ರೆಗೆ ಕೂಡಲ ಸಂಗಮ ಪೀಠದ ಸ್ವಾಮೀಜಿಯವರನ್ನು ಆಹ್ವಾನಿಸುತ್ತೀರಾ? ಎಂಬ ಪ್ರಶ್ನೆಗೆ ವಚನಾನಂದ ಶ್ರೀಗಳು ಈ ವಿಚಾರವನ್ನು ನಮ್ಮ ರಾಜ್ಯ ಸಂಘದವರು ತೀರ್ಮಾನಿಸುತ್ತಾರೆ ಎಂದು ಉತ್ತರಿಸಿದರು. ಇತರೆ ಎಲ್ಲಾ ಸಮುದಾಯದ ಪೀಠಗಳ  ಸ್ವಾಮೀಜಿಗಳವರು ನಾವು ಸ್ನೇಹಿತರಾಗಿದ್ದು, ಅವರವರ ಸಮುದಾಯದ ಅಭಿವೃದ್ಧಿ ಹೊತ್ತಿದ್ದರೂ, ಸಮುದಾಯ- ಸಮುದಾಯಗಳನ್ನು ಬೆಸೆಯುವ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು. 

ಹರ ಜಾತ್ರೆ ಸಮಿತಿ ಅಧ್ಯಕ್ಷ ಬಿ.ಲೋಕೇಶ್ ಮಾತನಾಡಿದರು. ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ತಾಲ್ಲೂಕು ಖಜಾಂಚಿ ಶಶಿಧರ ಪೂಜಾರ, ಜಿ.ಪಂ. ಸದಸ್ಯೆ ಸುವರ್ಣ ಆರುಂಡಿ ನಾಗರಾಜ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ, ವಕೀಲರುಗಳಾದ  ಪ್ರಕಾಶ ಪಾಟೀಲ, ವಿರೂಪಾಕ್ಷಪ್ಪ, ಮುಖಂಡ ರಾದ ಪಿ.ಬಿ. ಗೌಡ, ಚಂದ್ರಶೇಖರ ಪೂಜಾರ, ಮಂಜುನಾಥ ಪೂಜಾರ, ಬಿ.ಟಿ.ಕೊಟ್ರೇಶ, ಮಹೇಶ ಪೂಜಾರ, ಪೂಜಾರ ಶೇಖರಪ್ಪ, ಯರಿಸ್ವಾಮಿ, ಬೇಲೂರು ಸಿದ್ದೇಶ್, ಬಸವರಾಜ ಮುಲಾಲಿ, ಪರಶೆಟ್ಟಿ, ಕರಿಬಸಪ್ಪ, ಕೊಟ್ರೇಶ್, ಶ್ಯಾನಭೋಗ್, ಸುರೇಶ್, ಚನ್ನನಗೌಡ, ಅರವಿಂದ ಜಿ. ಗುಂಡಗತ್ತಿ, ಬಂದೋಳ್ ಬಸವರಾಜ, ಗಿರೀಶ್  ಇನ್ನಿತರರಿದ್ದರು.

error: Content is protected !!