ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲಿ

ದಾವಣಗೆರೆ, ಜ.6- ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರು ನಗರದ ಶ್ರೀಶೈಲ ಮಠದಲ್ಲಿ ಯುವ ಘಟಕದ ಸದಸ್ಯರೊಂದಿಗೆ ಸಭೆ ನಡೆಸಿ ಸಂಘಟನೆ ಹಾಗೂ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.

ಶೇ. 38 ರಷ್ಟು ಜನಸಂಖ್ಯೆ ಹೊಂದಿರುವ ನಮ್ಮ ಸಮಾಜ ಹರಿದು ಹಂಚಿಹೋಗಿದ್ದು, ಅದನ್ನು ಸಂಘಟಿಸಲು ಯುವ ಘಟಕ ತನ್ನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದರು.

ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಿಖಿಲ್ ಕೊಂಡಜ್ಜಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರ ಒಬಿಸಿಗೆ ಸೇರಿಸಿದರೆ ಸಮಾಜದ ಯುವಕರುಗಳಿಗೆ ಉದ್ಯೋಗ, ವಿದ್ಯಾಭ್ಯಾಸದಲ್ಲಿ ಪ್ರಾತಿನಿಧ್ಯ ಸಿಗಲಿದ್ದು, ಐಎಎಸ್, ಐಪಿಎಸ್ ನಂತಹ ಹುದ್ದೆಗಳಿಗೆ ನಮ್ಮ ಸಮಾಜದ ಯುವಕರು ಅವಕಾಶ ಪಡೆಯುವುದು ಸಾಧ್ಯವಾಗಲಿದೆ. 

ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕಿದೆ ಎಂದರು.

ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್.ಟಿ. ಪ್ರಶಾಂತ್ ಮಾತ ನಾಡಿ, ಧಾರವಾಡದಲ್ಲಿ  ನಡೆಯುವ ಕಾರ್ಯ ಕ್ರಮಕ್ಕೆ ಜಿಲ್ಲೆಯಿಂದ 10,000 ಯುವಕರನ್ನು ಕರೆತರುವ ಭರವಸೆ ನೀಡಿದರು.  ನಗರ ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ ಮಾತನಾಡಿ, ನೂತನ ರಾಷ್ಟ್ರೀಯ ಅಧ್ಯಕ್ಷರಿಗೆ ಯುವ ಘಟಕದ ಸಂಘಟನೆಯಲ್ಲಿ ಪೂರ್ಣ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.

ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಅಣಬೇರು, ಗೋಪಾಲ ಗೌಡ, ಸಿದ್ದು ಚೌಕ, ದಾವಣಗೆರೆ ತಾಲ್ಲೂಕು ಅಧ್ಯಕ್ಷ ನವೀನ್ ಕೋಡಿಹಳ್ಳಿ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ ಇನ್ನಿತರರಿದ್ದರು.

error: Content is protected !!