ದಾವಣಗೆರೆ, ಜ.2- ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಲು ಒತ್ತಾಯಿಸಿ ಇದೇ ದಿನಾಂಕ 6 ರ ಬುಧವಾರ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಕುರುಬರ ಜಾಗೃತಿ ಸಮಾವೇಶದ ಪೆಂಡಾಲ್ ನಿರ್ಮಾಣದ ಹಂದರ ಕಂಬ ಪೂಜೆ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೂಡಾ ಅಧ್ಯಕ್ಷರೂ ಆಗಿರುವ ಸಮಾಜದ ಮುಖಂಡ ರಾಜನಹಳ್ಳಿ ಶಿವಕುಮಾರ್, ನಗರದಲ್ಲಿ ನಡೆಯುವ ಸಮಾವೇಶದಲ್ಲಿ ಸುಮಾರು 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ರಾಜ್ಯಾದ್ಯಂತ ಎಸ್ಟಿ ಮೀಸಲಾತಿ ವಿಸ್ತರಿಸಬೇ ಕೆಂದು ಒತ್ತಾಯಿಸಿ ಜ.15ರಿಂದ ಕನಕ ಗುರುಪೀ ಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರು ವರೆಗೆ ನಡೆಸಲು ಉದ್ದೇಶಿಸಿರುವ ಬೃಹತ್ ಪಾದಯಾತ್ರೆಯ ಪೂರ್ವಭಾವಿಯಾಗಿ ಈ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಈ ಸಮಾವೇಶದಲ್ಲಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪುರ, ಸಮಾಜದ ಮುಖಂಡರಾದ ಹೆಚ್.ಎಂ.ರೇವಣ್ಣ, ವಿರೂಪಾಕ್ಷಪ್ಪ ಭಾಗವಹಿಸಲಿದ್ದಾರೆ. ಸಮಾವೇಶ ದಲ್ಲಿ ಭಾಗವಹಿಸುವ 50 ಜನ ಗಣ್ಯರಿಗಾಗಿ 60×40 ಚದರ ಅಡಿ ವಿಸ್ತೀರ್ಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುವುದು. ಹತ್ತು ಸಾವಿರ ಆಸನ, ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ಕುರುಬರ ಎಸ್ಟಿ ಹೋರಾಟ ಸಮಿತಿಯ ಬಿ.ಎಂ.ಸತೀಶ್, ಪಾಲಿಕೆ ಸದಸ್ಯೆ ಎಚ್.ಸಿ.ಜಯಮ್ಮ, ಮುಖಂಡರಾದ ಜೆ.ಕೆ.ಕೊಟ್ರಬಸಪ್ಪ, ಸಿದ್ಧಪ್ಪ, ಶಿವಮೂರ್ತಿ, ಶಿವಣ್ಣ, ಜಿ.ಬಸವರಾಜಪ್ಪ, ವಿರೂಪಾಕ್ಷಪ್ಪ ಜರಗನಹಳ್ಳಿ ಮತ್ತಿತರರಿದ್ದರು.