ಪೋಷಕರಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಕರೆ
ದಾವಣಗೆರೆ, ಜ. 2- ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ಕೊಡಿ. ವಿಕಲಚೇತನ ಮಕ್ಕಳು ಜನಿಸಿದರೆಂದು ತಂದೆ-ತಾಯಿಗಳು ಕೊರಗದೇ ಅವರಿಗೆ ಸಮಾಜದಲ್ಲಿ ಉತ್ತಮ ವೇದಿಕೆ ನೀಡುವ ಮೂಲಕ ಅವರಲ್ಲಿನ ಕೌಶಲ್ಯಗಳನ್ನು ಹೊರತರಬೇಕು. ಪ್ರತಿ ಹಂತದಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಪೋಷಕರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಆರ್‍ಪಿಡಿ ಟಾಸ್ಕ್‍ಫೋರ್ಸ್, ಜಿಲ್ಲಾ ಘಟಕ ದಾವಣಗೆರೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಇವರ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಆ ಯೋಜಿಸಲಾಗಿದ್ದ ವಿಕಲಚೇತನರಿಗೆ ಕಾನೂನು ಅರಿವು ಮತ್ತು ಸಾಧಕರಿಗೆ ಸನ್ಮಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯರಿಗಿಂತ ವಿಕಲಚೇತನರು ವಿಶ್ವಮಟ್ಟದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಉದಾಹರಣೆಗಳಿವೆ. ವಿಶ್ವದ ಶ್ರೇಷ್ಠ ವಿಜ್ಞಾನಿ ಐನ್‍ಸ್ಟೀನ್ ಕೂಡ ವಿಕಲಚೇತನರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಭಿರುಚಿ ಇರುವ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡಿದಲ್ಲಿ, ಅಸಾಮಾನ್ಯ ಸಾಧನೆ ಮಾಡುತ್ತಾರೆ ಎಂದು ಪ್ರತಿಪಾದಿಸಿದರು.
ಸಂಯುಕ್ತ ರಾಷ್ಟ್ರಗಳ ಒಕ್ಕೂಟದ ಅಂಗವಿಕಲರ ಒಡಂಬಡಿಕೆಯ ಅನುಸಾರ ಭಾರತ ಸರ್ಕಾರ ಅಂಗವಿಕಲರ ಕಾಯಿದೆ 2016ನ್ನು ಜಾರಿಗೊಳಿಸಿತು. ಅಂಗವಿಕಲ ವ್ಯಕ್ತಿಗಳ ಘನತೆ, ಸ್ವಾಯತ್ತತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡಲು, ಅಂಗವಿಕಲತೆ ಕಾರಣದಿಂದ ಒಬ್ಬ ವ್ಯಕ್ತಿಯನ್ನು ಭೇದಭಾವಕ್ಕೆ ಗುರಿಪಡಿಸಬಾರದೆಂದು, ಅವರಿಗೆ ಮುಕ್ತತೆ ಜತೆ ಯುಕ್ತ ಸೌಕರ್ಯಗಳನ್ನು ಪಡೆಯುವ ಹಕ್ಕುಗಳಿಗಾಗಿ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯೋಗ, ಸಾಮಾಜಿಕ ಭದ್ರತೆ, ಆರೋಗ್ಯ, ಪುನರ್ವಸತಿ ಕಲ್ಪಿಸಲು ಅನುವಾಗುವಂತೆ ವಿಸ್ತೃತವಾಗಿ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಅಂಗವಿಕಲರಿಗಾಗಿಯೇ ರಾಷ್ಟ್ರೀಯ ಮತ್ತು ರಾಜ್ಯ ನಿಧಿಗಳನ್ನು ಸ್ಥಾಪಿಸಲಾಗಿದ್ದು, ಅವರ ಮೇಲೆ ನಡೆಯುವ ಅಪರಾಧಗಳಿಗಾಗಿ ದಂಡನೆ ವಿಧಿಸುವ ಕಲಂಗಳನ್ನು ಕಾಯಿದೆಯಲ್ಲಿ ಅಳವಡಿಸಲಾಗಿದೆ. ಅವಕಾಶ ದೊರೆತರೆ ಅವರು ಸಾಧನೆ ಮಾಡಿ ತೋರಿಸುತ್ತಾರೆ. ಅವರಲ್ಲಿನ ಪ್ರತಿಭೆ ಪ್ರೋತ್ಸಾಹಿಸಿ, ಅವಕಾಶ ಕಲ್ಪಿಸಿಕೊಟ್ಟರೆ ಸಾಧನೆ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ವಿಕಲಾಂಗರು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ಧಾರೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ವಿಶೇಷ ಚೇತನರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇವುಗಳ ಬಗ್ಗೆ ಅರಿವು ಮೂಡಿಸುವ ಮತ್ತು ಸಕಾಲದಲ್ಲಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಾಂತರ ಕೈ ಜೋಡಿಸಿ, ಪ್ರತಿ ಸವಲತ್ತುಗಳು ಸಿಗುವಂತೆ ಮಾಡಬೇಕೆಂದರು.
ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ಶಶಿಧರ್ ಮಾತನಾಡಿದರು.
ಆರ್‍ಪಿಡಿ ಟಾಸ್ಕ್‍ಫೋರ್ಸ್‍ನ ರಾಜಾ ಧ್ಯಕ್ಷ ಮಂಜುನಾಥ್, ಬಾಬುಖಾನ್, ಕೆ. ಎಸ್.ಮಂಜುನಾಥ್, ವಿಶ್ವನಾಥ್, ಉಮಾ ಸುರೇಶ್, ಶೋಭಾ, ಡಾ.ಪುಷ್ಪಲತಾ, ಕಾರ್ಯಕ್ರಮದ ಸಂಚಾಲಕರಾದ ವಿಜಯ ಲಕ್ಷ್ಮಿ, ಆಶ್ರಫ್‍ಅಲಿ ಮಾತನಾಡಿದರು. ಆರ್‍ಪಿಡಿ ಸದಸ್ಯ ಇಂಧೂದರ, ಎಸ್.ಜಿ.ಶಿವಪುತ್ರಪ್ಪ ಹಾಗೂ ಇತರರು ಇದ್ದರು.