ಗ್ರಾ.ಪಂ.ನೂತನ ಸದಸ್ಯರಿಗೆ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಕಿವಿಮಾತು
ಹರಪನಹಳ್ಳಿ, ಜ.2- ಜನ ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತದೆ. ತಮ್ಮ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಮೊದಲ ಆದ್ಯತೆಯಾಗಿ ಒಳ ಚರಂಡಿ, ಶುದ್ಧ ಕುಡಿಯುವ ನೀರು, ರಸ್ತೆ ಅಭಿವೃದ್ದಿ, ಬೀದಿ ದೀಪ, ಕಡುಬಡವರಿಗೆ ವಸತಿ ಕಲ್ಪಿಸುವುದು ಸೇರಿದಂತೆ, ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಗ್ರಾಮ ಪಂಚಾಯ್ತಿಗೆ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಿಗೆ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಜಾತಿ, ಕುಲ, ಮತ, ಧರ್ಮದ ಹೆಸರಿನಲ್ಲಿ ಭೇದಭಾವ ಮಾಡದೇ ಎಲ್ಲರನ್ನು ಒಳಗೊಂಡು ಅಭಿವೃದ್ದಿ ಮಾಡುವ ಮೂಲಕ ಗಾಂಧೀಜಿ ಕನಸಿನ ಸಮ ಸಮಾಜ ನಿರ್ಮಾಣ ಮಾಡಬೇಕು. ಅಧಿಕಾರ ವಿಕೇಂದ್ರಿಕರಣಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್ ಪಕ್ಷ ನೆಲಕಚ್ಚಿಲ್ಲ, ಸದೃಢವಾಗಿದೆ ಎನ್ನುವುದಕ್ಕೆ ನೆರೆದಿರುವ ಕಾರ್ಯಕರ್ತರೇ ಸಾಕ್ಷಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಫೀನಿಕ್ಸ್ ಹಕ್ಕಿಯಂತೆ ಪುನಃ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ಮತ್ತಿಹಳ್ಳಿ ಕೊಟ್ರಗೌಡ ಮಾತನಾಡಿ, ಸದಸ್ಯರು ತಮ್ಮ ತಮ್ಮ ವಾರ್ಡ್ಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡಬೇಕು. ಹಳ್ಳಿಯ ಜನರನ್ನು ಪಂಚಾಯ್ತಿಗಳಿಗೆ ಅಲೆದಾಡಿಸದಂತೆ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.
ಹಲುವಾಗಲು ಗ್ರಾಮದ ಕೆಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕುಂಚೂರು ಗ್ರಾ.ಪಂ. ಸದಸ್ಯ ಸಂಜೀವಪ್ಪ ಕಾಂಗ್ರೆಸ್ ಸೇರ್ಪಡೆಗೊಂಡರು. ತಾ.ಪಂ. ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮಿ, ರವಿ ಯುವ ಶಕ್ತಿ ಅಧ್ಯಕ್ಷ ಉದಯಶಂಕರ್, ಮತ್ತಿಹಳ್ಳಿ ಬಸವರಾಜ, ಮೈದೂರು ರಾಮಣ್ಣ, ಮುಖಂಡರಾದ ಕೆ.ಕಲ್ಲಹಳ್ಳಿ ಗೋಣ್ಯೆಪ್ಪ ಮಾತನಾಡಿದರು.
ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಟಿ.ಹೆಚ್.ಎಂ.ಮಂಜುನಾಥ್, ಮುಖಂಡರಾದ ಕಾನಹಳ್ಳಿ ರುದ್ರಪ್ಪ, ಕಡಬಗೆರೆ ಮಲ್ಲಿಕಾರ್ಜುನ್, ಬಾಗಳಿ ಭರಮನಗೌಡ, ಮತ್ತಿಹಳ್ಳಿ ಬಸವರಾಜ್, ಬಾಗಳಿ ಚಿದಾನಂದಪ್ಪ, ವಾಮದೇವನಗೌಡ, ಅಡವಿಹಳ್ಳಿ ದಕ್ಷಿಣಮೂರ್ತಿ, ರಾಯದುರ್ಗ ವಾಗೀಶ್, ಕನಕನಬಸಾಪುರ ಮಂಜುನಾಥ, ನಿಚ್ಚವ್ವನಹಳ್ಳಿ ವಕೀಲ ಕೆ.ಆನಂದ್, ಮುತ್ತಿಗಿ ಸಾಬಳ್ಳಿ ಮಂಜುನಾಥ, ಎಂ.ವಿ.ಕೃಷ್ಣಕಾಂತ್, ಉದಯಶಂಕರ್, ಮತ್ತೂರು ಬಸವರಾಜ್, ಕವಿತಾ ಸುರೇಶ್, ನಂದ್ಯಾಲ ಮಲ್ಲಿಕಾ ರ್ಜುನ್, ಕೂಲಹಳ್ಳಿ ವೆಂಕಟೇಶ್, ಪ್ರಸಾದ್ ಕವಾಡಿ ಮತ್ತಿತರರು ಉಪಸ್ಥಿತರಿದ್ದರು.