ಮುಂಜಾಗ್ರತಾ ಕ್ರಮ ಅನುಸರಿಸಿ ಶಿಕ್ಷಣ ಪಡೆಯುವುದು ಅನಿವಾರ್ಯ: ಸಿಇಓ ಪದ್ಮಾ ಬಸವಂತಪ್ಪ
ದಾವಣಗೆರೆ, ಜ.2- ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಿಕ್ಷಣ ಪಡೆಯುವುದು ಅನಿವಾರ್ಯ ಹಾಗೂ ಅವಶ್ಯಕತೆ ಇದೆ. ಶಿಕ್ಷಣ ಪಡೆಯುವಲ್ಲಿ ಕೊರೊನಾದಂತಹ ಯಾವುದೇ ಸಾಂಕ್ರಾಮಿಕ ರೋಗಗಳು ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ ಶಿಕ್ಷಣ ಪಡೆಯುವುದು ಅವಶ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪದ್ಮಾ ಬಸವಂತಪ್ಪ ಹೇಳಿದರು.
ಸರ್ಕಾರದ ಆದೇಶದಂತೆ ಶಾಲೆ ಪ್ರಾರಂಭೋತ್ಸವ ಹಾಗೂ ವಿದ್ಯಾಗಮ-2 ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಪದ್ಮಾ ಬಸವಂತಪ್ಪ ಅವರು ಮೆಳ್ಳೇಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಗುಲಾಬಿ ಹೂ ನೀಡಿ, ಹಿತ ನುಡಿಗಳನ್ನಾಡಿದರು.
ಮೆಳ್ಳೇಕಟ್ಟೆ ಸರ್ಕಾರಿ ಪ್ರೌಢಶಾಲೆ 5 ಬಾರಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ.100 ರಷ್ಟು ಪಡೆದಿದ್ದು ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತಿದೆ ಎಂದ ಅವರು, ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಆರ್.ರಶ್ಮಿಗೆ ಇಲಾಖೆ ಯಿಂದ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸಿ, ಇಂತಹ ಪ್ರತಿಭೆಗಳು ಇನ್ನೂ ಹೆಚ್ಚೆಚ್ಚು ಹೊರಬರಬೇಕು. ಈ ಬಗ್ಗೆ ಪಾಲಕರು ಮಕ್ಕಳಿಗೆ ಹೆಚ್ಚಾಗಿ ಶೈಕ್ಷಣಿಕ ಸೌಕರ್ಯ ಕಲ್ಪಿಸಿಕೊಟ್ಟು ನಿರಂತರ ಹಾಜರಾತಿಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿ, ಮಕ್ಕಳು ಹೆಚ್ಚು ಹೆಚ್ಚು ಓದುವ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿ ಕಾರಿ ಜಿ.ಕೊಟ್ರೇಶ್ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ದಾವಣಗೆರೆ ಉತ್ತರ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಯ್ಕ ಮಾತನಾಡಿದರು. ಮುಖ್ಯಶಿಕ್ಷಕ ಪಿ. ರಾಮಪ್ಪಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್‍ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಗ್ರಾ.ಪಂ ಸದಸ್ಯರಾದ ಸಣ್ಣಚನ್ನಬಸಪ್ಪ, ಎ.ಕೆ.ಹನುಮಂತಪ್ಪ, ಬಿ.ಕೆ.ಮಂಜುನಾಥ, ಕವಿತಾ, ಹನುಮಂತಮ್ಮ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಸಂತೋಷ್‍ಕುಮಾರ್ ಸ್ವಾಗತಿಸಿದರು. ಕನ್ನಡ ಶಿಕ್ಷಕ ಶಿವಯ್ಯ ನಿರೂಪಿಸಿದರು. ಎಂ. ಬಸವರಾಜಗೌಡ ವಂದಿಸಿದರು.