ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಸ್ಮಾರ್ಟ್ ಸಿಟಿ ಯೋಜನೆಯಡಿ 15 ಕೋಟಿ ರೂ. ವೆಚ್ಚ: ಸಂಸದ ಸಿದ್ದೇಶ್ವರ

ದಾವಣಗೆರೆ, ಜ. 2 – ಸ್ಮಾರ್ಟ್‍ಸಿಟಿ ಯೋಜನೆಯಡಿ ಕುಂದುವಾಡ ಕೆರೆ ಯನ್ನು 15 ಕೋಟಿ ರೂ. ವೆಚ್ಚದಲ್ಲಿ ಅಭಿ ವೃದ್ಧಿಗೊಳಿಸುವ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದ್ದಾರೆ.

ಕೆರೆ ಆವರಣದಲ್ಲಿ ಆಯೋಜಿಸ ಲಾಗಿದ್ದ ಸಮಾರಂಭದಲ್ಲಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಂದವಾಡ ಕೆರೆ ಏರಿಗೆ ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ಸಾಕಷ್ಟು ಜನ ವಾಯುವಿಹಾರಕ್ಕೆ ಬರುತ್ತಾರೆ.  ಇಲ್ಲಿನ ವಾತಾವರಣ ಆಹ್ಲಾದಕರವಾಗಿರ ಬೇಕು,  ವಾಯುವಿಹಾರಿಗಳಿಗೆ ಅನುಕೂಲ ವಾಗುವಂತೆ ನೋಡಿಕೊಳ್ಳಿ ಎಂದರು.

ಕಾಮಗಾರಿ ಕುರಿತು ವಿವರಣೆ ನೀಡಿದ ಸ್ಮಾರ್ಟ್‍ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಕುಂದುವಾಡ ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕುಂದವಾಡ ಕೆರೆ ಏರಿಯ ಮೇಲೆ ಮತ್ತು ಕೆರೆಯಲ್ಲಿ ಬೆಳೆದಿರುವ ಸಾಕಷ್ಟು ಕಳೆ, ಹೂಳು ಇತ್ಯಾದಿಗಳಿಂದ ಬೇಸಿಗೆಯಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಕೆರೆಯ ಮುಖ್ಯ ಏರಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕೆರೆಯ ಒಟ್ಟು 4.90 ಕಿ.ಮೀ. ಉದ್ದದ ಏರಿಯನ್ನು ಅಭಿವೃದ್ಧಿಪಡಿಸಲಾಗುವುದು.  ಕೆರೆ ಏರಿ ಆವರಣದಲ್ಲಿ ಬೆಳೆದಿರುವ ಪೊದೆ, ಮುಳ್ಳನ್ನು ತೆರವುಗೊಳಿಸಿ, ಕೆರೆ ಏರಿಯನ್ನು ಎತ್ತರಿಸಲಾಗುವುದು ಅಲ್ಲದೆ ವಿಸ್ತರಿಸಲಾಗುವುದು.  ಕೆರೆಯ ಒಳಮುಖದ ಇಳಿಜಾರಿನ ರಕ್ಷಣಾ ಕಾರ್ಯ ಕೈಗೊಳ್ಳಲಾಗುವುದು.  ಪಾದಚಾರಿಗಳ ವಾಕಿಂಗ್ ಪಥ ರಚಿಸಿ, ಸುಧಾರಿಸಲಾಗುವುದು ಎಂದರು. 

ಸಾದರಹಳ್ಳಿ ಕಲ್ಲಿನ ಆಸನಗಳು ಮತ್ತು ಇತರೆ ಅಲಂಕಾರಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.  ಸ್ಥಿರವಾದ ಪಾಲಿಥೀನ್ ಡಸ್ಟ್‍ಬಿನ್‍ಗಳ ಅಳವಡಿಕೆ, ವಿದ್ಯುತ್ ಕಂಬ ಹಾಗೂ ದೀಪಗಳನ್ನು ಅಳವಡಿಸುವಂತಹ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷದ ಕಾಲಮಿತಿ ನಿಗದಿಪಡಿಸಲಾಗಿದೆ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!