ಕೊಂಡಜ್ಜಿಯಲ್ಲಿನ ಎಸ್ಟಿ ನೌಕರರ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ
ಮಲೇಬೆನ್ನೂರು, ಜ.2- ಮೀಸಲಾತಿ ಹೆಚ್ಚಳ ಮತ್ತು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಮಠಾಧೀಶರು ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳನ್ನು ಖಾಸಗೀ ಕರಣ ಮಾಡದಂತೆ ಹೋರಾಟ ಮಾಡಬೇ ಕೆಂದು ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಹೇಳಿದರು.
ಅವರು ಶನಿವಾರ ಕೊಂಡಜ್ಜಿ ಗ್ರಾಮದ ಕೊಂಡಜ್ಜಿ ಬಸಪ್ಪ ಸ್ಕೌಟ್ ಮತ್ತು ಗೈಡ್ಸ್ ಶಿಬಿರ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಕುರಿತು ಅರಿವು ಕಾರ್ಯಾಗಾರ ಮತ್ತು ರಾಜ್ಯ ಕಾರ್ಯಕಾರಿಣಿ, ಗಿರಿಜನ ಉತ್ಸವ ಕಾರ್ಯಕ್ರಮದಲ್ಲಿ 2021 ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗ ಳನ್ನು ಖಾಸಗೀಕರಣ ಮಾಡುವುದರಿಂದ ನೌಕರರ ನೇಮಕಾತಿಯಲ್ಲಿ ಮೀಸಲಾತಿ ಇರುವುದಿಲ್ಲ ಮತ್ತು ಈಗಿರುವ ಸೌಲಭ್ಯಗಳೂ ಇರುವುದಿಲ್ಲ. ಏಜೆನ್ಸಿ ಮೂಲಕ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಅವರನ್ನು ದುಡಿಸಿಕೊಂಡು ಸರಿಯಾಗಿ ಸಂಬಳ ನೀಡದೆ ಸತಾಯಿಸುತ್ತಾರೆ ಎಂದು ದೂರಿದರು.
ಈಗ ನಾವು ಹೋರಾಟ ಮಾಡಿ ಪಡೆದುಕೊಳ್ಳುವ ಮೀಸಲಾತಿ ಆಗ ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಎಲ್ಲಾ ಮಠಾಧೀಶರು ಕೇಂದ್ರ ಸರ್ಕಾರ ಮಾಡುತ್ತಿರುವ ಖಾಸಗೀಕರಣದ ವಿರುದ್ಧ ಹೋರಾಟ ಮಾಡಿ, ಸರ್ಕಾರಿ ಸಂಸ್ಥೆಗಳನ್ನು ಸರ್ಕಾರದ ಅಧೀನದಲ್ಲಿ ಉಳಿಯುವಂತೆ ಮಾಡಬೇಕೆಂದು ಹೆಚ್.ಕೆ. ರಾಮಚಂದ್ರಪ್ಪ ಮನವಿ ಮಾಡಿದರು.
ಅಲ್ಲದೇ ಇತ್ತೀಚೆಗೆ ನೇಮಕವಾಗುವ ನೌಕರರಿಗೆ ಪಿಂಚಣಿ ಸೌಲಭ್ಯ ಇಲ್ಲದಂತೆ ಮಾಡಿರುವ ಸರ್ಕಾರ ಹಂತ ಹಂತವಾಗಿ ನೌಕರರ ಭದ್ರತೆಗಳನ್ನು ಕಡಿತಗೊಳಿಸಲಿದೆ. ಈ ಬಗ್ಗೆಯೂ ನೌಕರರು ಜಾಗೃತರಾಗಬೇಕೆಂದರು.
ಖಾಸಗೀಕರಣ ಹೆಚ್ಚಾದಂತೆ, ಮೀಸಲಾತಿಗೆ ಬೆಲೆ ಇಲ್ಲದಂತಾಗುತ್ತದೆ. ದುಡಿಯುವ ಜನ ಬೀದಿ ಪಾಲಾಗುತ್ತಾರೆ. ಈ ಬಗ್ಗೆಯೂ ಮಠಾಧೀಶರು ಚಿಂತನೆ ಮಾಡಲಿ. ಮುಂದೆ ಶಿಕ್ಷಣದಲ್ಲೂ ಇದೇ ವ್ಯವಸ್ಥೆ ಬರಲಿದೆ ಕಾದು ನೋಡಿ ಎಂದು ರಾಮಚಂದ್ರಪ್ಪ ಎಚ್ಚರಿಸಿದರು.
ಹರಿಹರದ ಎಸ್ಜೆಯುಪಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಇವತ್ತಿನ ಪರಿ ಸ್ಥಿತಿಯಲ್ಲಿ ಸರ್ಕಾರಿ ನೌಕರಿ ಮಾಡುವುದು ಅಪರಾಧವಾಗಿದೆ. ಈ ದೇಶದಲ್ಲಿ ಸರ್ಕಾರಿ ನೌಕರ ಪ್ರಾಮಾಣಿಕವಾಗಿ ಕೆಲಸ ಮಾಡುವು ದೂ ಕಷ್ಟವಾಗಿದೆ. ಪ್ರಭಾವಿಗಳು ನೌಕರರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನೌಕರಿ ಸಿಕ್ಕವನು ಕುಟುಂಬದವರನ್ನು, ಬಂಧು-ಮಿತ್ರರನ್ನು, ಊರು-ಕೇರಿಯನ್ನು ಮರೆಯದೆ ಅವರ ಏಳಿಗೆಗಾಗಿ ಶ್ರಮಿಸಬೇಕು. ಸಮಾಜದಲ್ಲಿ ಅಂಬೇಡ್ಕರ್ ಅವರ ಪರಿಕಲ್ಪನೆಗಳನ್ನು ಬಿತ್ತಬೇಕು. ಬಹುತ್ವದ ಭಾರತವನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆಗಳು ಸಮಾಜಮುಖಿಯಾಗಿರಬೇಕೆಂದು ಎ.ಬಿ. ರಾಮಚಂದ್ರಪ್ಪ ಹೇಳಿದರು.
ಬೆಸ್ಕಾಂ ಎಇಇ ಕೆ.ಎಸ್. ಜಯ್ಯಪ್ಪ ಮಾತನಾಡಿ, ಸರ್ಕಾರ ಈಗಾಗಲೇ ಬಿಎಸ್ಎನ್ಎಲ್, ಸಾರಿಗೆ ಮತ್ತಿತರೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ್ದು, ಮುಂದೆ ವಿದ್ಯುತ್, ಜಲಸಂಪನ್ಮೂಲ ಇಲಾಖೆಗಳನ್ನೂ ಖಾಸಗೀಕರಣ ಮಾಡುವ ಸಾಧ್ಯತೆ ಇದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ ಎನ್.ಇ. ನಟರಾಜ್, ಸರ್ಕಾರಿ ನೌಕರರ ಎನ್ಪಿಎಸ್ ಜಿಲ್ಲಾಧ್ಯಕ್ಷ ಜಿ.ಬಿ. ಶಿವಕುಮಾರ್, ಕೃಷಿ ವಿಜ್ಞಾನಿ ಡಾ. ಮಂಜುನಾಥ್ ಮಾತನಾಡಿದರು.
ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೆ. ನಾಗ ರಾಜ್, ಸಂಚಾಲಕ ಜಿ.ಆರ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಡಿ.ಆರ್. ರಂಗ ಸ್ವಾಮಿ, ವಿಜಯ್ ಮದಕರಿ, ಜಿಲ್ಲಾ ಎಸ್ಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಹೆಚ್. ಗೋವಿಂದರಾಜ್, ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಗುಂಡಪ್ಪ, ಸಂಘಟನಾ ಕಾರ್ಯದರ್ಶಿ ಕೇಶವಮೂರ್ತಿ, ಯುವ ಮುಖಂಡ ಶಾಮನೂರು ಪ್ರವೀಣ್, ಶ್ಯಾಗಲೆ ಮಂಜುನಾಥ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ಕೆ. ಸದಾನಂದ್, ಧಾರವಾಡ ಜಿಲ್ಲಾಧ್ಯಕ್ಷ ತ್ಯಾಗರಾಜ್ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಾವಣಗೆರೆ ತಾ. ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಅಣ್ಣಪ್ಪ, ಉಪಾಧ್ಯಕ್ಷ ಎಸ್.ಕೆ. ಸ್ವಾಮಿ, ಬಿ. ರಂಗಸ್ವಾಮಿ, ರುದ್ರೇಶ್, ರಾಘವೇಂದ್ರ ಅವರಿಗೆ ಪದಗ್ರಹಣ ಮಾಡಲಾಯಿತು.
ದಾವಣಗೆರೆ ಜಿಲ್ಲಾ ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್ ನಾಯಕ ಸ್ವಾಗತಿಸಿದರು. ಶಿಕ್ಷಕ ಹರೀಶ್ ನಿರೂಪಿಸಿದರೆ, ಪರಮೇಶ್ ಪುಟ್ಟಪ್ಪನವರ್ ವಂದಿಸಿದರು.