ಮಾಜಿ ಶಾಸಕ ಎಚ್.ಪಿ.ರಾಜೇಶ್
ಜಗಳೂರು, ಜ.3- ವಿಧಾನಸಭಾ ಕ್ಷೇತ್ರದಲ್ಲಿ 15 ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್ ಪಕ್ಷದ ಆಡಳಿತದ ವಶಕ್ಕೆ ಸೇರಲಿವೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ಹಾಗೂ ಅರಸೀಕೆರೆ ಹೋಬಳಿ 7 ಗ್ರಾಮ ಪಂಚಾಯಿತಿಗಳು ಸೇರಿದಂತೆ ವಿಧಾನಸಭಾ ಕ್ಷೇತ್ರ ದಲ್ಲಿ ಒಟ್ಟು 534 ಸ್ಥಾನಗಳಿಗೆ 300ಕ್ಕೂ ಅಧಿಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಸಮಿತಿ ರಚನೆಯಾಗಿದ್ದರೂ ಬಗರ್ ಹುಕ್ಕುಂ ಸಾಗುವಳಿ ಹಕ್ಕು ಪತ್ರ ವಿತರಿಸದೆ ಭೂ ಒಡೆತನ ಯೋಜನೆ ಸಾಕಾರಗೊಂಡಿಲ್ಲ ಎಂದು ಆರೋಪಿಸಿದರು.
ನನ್ನ ಅವಧಿಯಲ್ಲಿ ಮಾಳಮ್ಮನಹಳ್ಳಿ ಸೇರಿ ಕೆಲ ಹಳ್ಳಿಗಳನ್ನೊಳಗೊಂಡಂತೆ ಪುರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಪ್ರಸಕ್ತ ಜನಗಣತಿ ಪ್ರಕ್ರಿಯೆಯೊಳಗೆ ಸಚಿವ ಸಂಪುಟ ಸಭೆಯಲ್ಲಿ ಹೊಳಲ್ಕೆರೆ ಶಾಸಕರಂತೆ ಆಡಳಿತ ಪಕ್ಷದಲ್ಲಿ ಶಾಸಕರು ಪ್ರಸ್ತಾವನೆಗೆ ಪ್ರಯತ್ನಿಸದೇ ಇದೀಗ ಸಮಯ ಕೈ ಮೀರಿದಾಗ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿರುವುದು
ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ತಾಲ್ಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಪದಾಧಿಕಾರಿಗಳಾದ ಪಲ್ಲಾಗಟ್ಟೆ ಶೇಖರಪ್ಪ, ಲೋಕೇಶ್, ಬಿ. ವೆಂಕಟೇಶ್, ಮುಖಂಡರಾದ ಚಿತ್ತಪ್ಪ ಗೋಡೆ ಪ್ರಕಾಶ್, ಮರೇನಹಳ್ಳಿ ಶೇಖರಪ್ಪ, ಅಸಾದುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು.