ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್
ಜಗಳೂರು, ಜ.3- ವಿಧಾನಸಭಾ ಕ್ಷೇತ್ರದ 29 ಗ್ರಾಮ ಪಂಚಾಯಿತಿಗಳಲ್ಲಿ 320 ಕ್ಕೂ ಅಧಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕೆಲವೇ ದಿನಗಳಲ್ಲಿ ಅಧ್ಯಕ್ಷರ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ 20 ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳ ಆಡಳಿತ ಬಿಜೆಪಿ ವಶಕ್ಕೆ ಬರಲಿವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬಿಜೆಪಿ ವತಿಯಿಂದ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರ ಹಾಗೂ ಶಾಸಕರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರುಗಳ ಸಮಾವೇಶ ಆಯೋಜಿಸಲಾಗುವುದು ಎಂದರು.
ಶಾಸಕರ ಬಗ್ಗೆ ಟೀಕೆಗಳು ಸಲ್ಲದು: ಕ್ಯಾಬಿನೆಟ್ ದರ್ಜೆ ಸ್ಥಾನ ಹೊಂದಿರುವ ಶಾಸಕ ಎಸ್.ವಿ.ರಾಮಚಂದ್ರ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಅಭಿವೃದ್ಧಿ ಪರವಾಗಿದ್ದಾರೆ. ಇದನ್ನು ಸಹಿಸದೆ ವಿರೋಧ ಪಕ್ಷದವರು ವಿನಾಕಾರಣ ಪತ್ರಿಕಾ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಪುರಸಭೆ ಸಾಧ್ಯವಿಲ್ಲ ಎಂಬ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಪಟ್ಟಣದಲ್ಲಿ 17,534 ಜನಸಂಖ್ಯೆ ಹೊಂದಿದ್ದು ಪುರಸಭೆಗೆ 20 ಸಾವಿರ ಜನಸಂಖ್ಯೆ ಅಗತ್ಯವಿದೆ. ಹೀಗಾಗಿ ನೆರೆಹೊರೆಯ ಹಳ್ಳಿಗಳನ್ನು ಸೇರ್ಪಡೆಗೊಳಿ ಸಿದ ಪ್ರಸ್ತಾವನೆ ಕುರಿತ ಶಾಸಕರ ಭರವಸೆ ಸತ್ಯವಾಗಿದೆ ವಿಳಂಬವಾಗಿರಬಹುದು. ಆದರೆ ಈ ಬಾರಿಯೇ ಪುರಸಭೆಯಾಗುವುದು ಖಚಿತ ಎಂದರು.
47 ಸಾವಿರ ಎಕರೆ ನೀರಾವರಿ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಕೇಂದ್ರ ಜಲ ಆಯೋಗ ಘೋಷಿಸಿ 16,125 ಕೋಟಿ ರೂ. ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಕ್ರಿಯೆ ಆರಂಭವಾಗುತ್ತದೆ. ಭದ್ರಾ ಹಿನ್ನೀರು ಯೋಜನೆಯಡಿ ಕನಿಷ್ಠ 2 ಗ್ರಾಮ ಪಂಚಾಯಿ ತಿಗಳ ವ್ಯಾಪ್ತಿಗೆ ನೀರು ಬರಲಿದೆ. ಅಂದು ಟೀಕಾಕಾರರಿಗೆ ಅರ್ಥವಾಗಲಿದೆ ಎಂದು ಎದುರೇಟು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ, ಸದಸ್ಯ ಎಸ್.ಕೆ. ಮಂಜುನಾಥ್, ಪಟ್ಟಣದ ಪಂಚಾಯಿತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ ಭಾಗವಹಿಸಿದ್ದರು.