ಅಸಾಂಕ್ರಾಮಿಕ ರೋಗಗಳ ಪತ್ತೆಗೆ ವಿಶೇಷ ಗಮನ ಹರಿಸಲು ಕರೆ

ಮಲೇಬೆನ್ನೂರು, ಜ.1- ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಅಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಶ್ರೀನಿವಾಸ್ ಅವರು ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆ ಮತ್ತು ಪುರುಷರಲ್ಲಿ ಉಂಟಾಗುವ ಆರೋಗ್ಯದ ಏರುಪೇರುಗಳಲ್ಲಿ ಆಗುವ ವ್ಯತ್ಯಾಸದಿಂದಾಗಿ ಅಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ. ಇವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ ಎಂದು ಡಾ. ಶ್ರೀನಿವಾಸ್ ಸ್ಪಷ್ಟಪಡಿಸಿದರು.

ಬಿ.ಪಿ, ಸಕ್ಕರೆ ಕಾಯಿಲೆ, ಹೃದಯ ರೋಗ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಇನ್ನೂ ಮುಂತಾದ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಮಾಡಲು ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಬಿಪಿ, ಸಕ್ಕರೆ ಕಾಯಿಲೆ ಪತ್ತೆ ಮಾಡುವ ಯಂತ್ರಗಳನ್ನು ನೀಡಲಾಗಿದೆ. ಇವರಿಗೆ ತರಬೇತಿ ನೀಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಸಾಂಕ್ರಾಮಿಕ ರೋಗಗಳ ಪ್ರಾರಂಭಿಕ ಲಕ್ಷಣಗಳನ್ನು ಗುರುತಿಸಿ, ಆದಷ್ಟು ಬೇಗ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ, ಆರೋಗ್ಯ ಹಾಗೂ ಆಶಾ ಕಾರ್ಯಕರ್ತರಿಗೆ ಡಾ. ಶ್ರೀನಿವಾಸ್ ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಟಿಹೆಚ್ಓ ಡಾ.ಚಂದ್ರಮೋಹನ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಹಿರಿಯ ಆರೋಗ್ಯ ಸಹಾಯಕರಾದ ಎಂ.ಉಮಣ್ಣ, ಎಂ.ವಿ.ಹೊರಕೇರಿ, ಎನ್‌ಸಿಡಿ ಕೋ ಆರ್ಡಿನೇಟರ್ ಡಾ. ಗೌಡ, ಸತೀಶ್, ಜಿಲ್ಲಾ ಮೇಲ್ವಿಚಾರಕ ಕಿರಣ್ ಮತ್ತಿತರರು ಈ ವೇಳೆ ಹಾಜರಿದ್ದರು. 

ನಂತರ ಡಾ. ಶ್ರೀನಿವಾಸ್ ಅವರು ಭಾನುವಳ್ಳಿ, ನಂದಿಗುಡಿ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿದರು.

error: Content is protected !!