ಜಗಳೂರು, ಜ.17- ಬಿ.ಇಡಿ ಹಾಗೂ ಪ್ಯಾರಾಮೆಡಿಕಲ್ ಖಾಸಗಿ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್ ನೀಡದಿರು ವುದನ್ನು ವಿರೋಧಿಸಿ, ಇಂದು ಪಟ್ಟಣ ದಲ್ಲಿ ಎಸ್ಎಫ್ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಸಂಚಾಲಕ ಅನಂತ ರಾಜ್ ಮಾತನಾಡಿ, ಬಿ.ಇಡಿ ಹಾಗೂ ಪ್ಯಾರಾ ಮೆಡಿಕಲ್ಗೆ ಸರ್ಕಾರಿ ಕೋಟಾದಲ್ಲಿ ಕಾಲೇಜಿನಲ್ಲಿ ಅವಕಾಶ ಸಿಗದೆ ಖಾಸಗಿ ಕೋಟಾದಲ್ಲಿ ಕಾಲೇಜಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿರುವುದು ದುರಂತ ಎಂದರು.
ಖಾಸಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬರುವುದಿಲ್ಲ ಎಂಬುವ ನೆಪವನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯವನ್ನು ಕೊಡುತ್ತಿಲ್ಲ. ದೂರ ದೂರಿನಿಂದ ಪಟ್ಟಣಕ್ಕೆ ಬಂದು ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಸರ್ಕಾರ ಈ ಕೂಡಲೇ ತನ್ನ ನೀತಿಯನ್ನು ಕೈಬಿಟ್ಟು ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಮಹಾಲಿಂಗಪ್ಪ ಜೆ.ಹೆಚ್.ಎಂ. ಹೊಳೆ ಮಾತನಾಡಿ, ಪ್ರಸುತ್ತ ಕೊರೊನಾ ಮಾರಕ ರೋಗ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಇಳಿಮುಖವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳು. ಆದರಿಂದ ಸರ್ಕಾರಗಳು ಎಚ್ಚೆತ್ತು ಕೊಂಡು ವಿದ್ಯಾರ್ಥಿ ವೇತನವನ್ನು ಪ್ರಾರಂಭ ಮಾಡಬೇಕು ಮತ್ತು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಫ್ತಿಕಾರ್ ಅಹಮದ್, ಎಸ್ಎಫ್ಐ ಸಹ ಸಂಚಾಲಕ ನಾಗರಾಜ್ ಎಸ್., ಪಿ.ಕಾಟಲಿಂಗಪ್ಪ, ವಿದ್ಯಾರ್ಥಿಗಳಾದ ಸಮ್ರಿನ್, ನಯನ, ಮಾನಸ, ಸುಪ್ರಿಯಾ, ಜ್ಯೋತಿ ಕುಮಾರ್, ಲಿಂಗರಾಜಪ್ಪ ಮತ್ತಿತರರಿದ್ದರು.