ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಇಂದು ಜರುಗಲಿದೆ ಎಂದು ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದರು.
ಇಂದು ಸಂಜೆ 6 ಗಂಟೆಗೆ ಸ್ವಾಮಿಯ ಮಹಾ ರಥೋತ್ಸವ ನಡೆದ ಬಳಿಕ ರಾತ್ರಿ ಉಯ್ಯಾಲೆ ಮಂಟಪದಲ್ಲಿ ಸ್ವಾಮಿ ಆಸೀನರಾಗಲಿದ್ದು, ನಂತರ ವೀರಗಾಸೆ ಸೇವೆ ನಡೆಯಲಿದೆ. ನಾಳೆ ಮಂಗಳವಾರ ಬೆಳಗ್ಗೆ 8ಕ್ಕೆ ಸ್ವಾಮಿಯ ಗುಗ್ಗಳ ಸೇವೆ, ರಾತ್ರಿ 10 ಗಂಟೆಗೆ ಭಕ್ತರಿಂದ ಓಕಳಿ ಸೇವೆ ಮತ್ತು ಗಂಗಾ ಪೂಜೆ ನಡೆಯಲಿದೆ.
ದಿನಾಂಕ 19ರಂದು ಬೆಳಿಗ್ಗೆ 8 ಗಂಟೆಗೆ ಸಕಲ ಬಿರುದಾವಳಿಗಳೊಂದಿಗೆ ಉಯ್ಯಾಲೆ ಮಂಟಪದಿಂದ ಸ್ವಾಮಿಯ ಗುಗ್ಗಳದೊಂದಿಗೆ ರೇವಣಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ಸ್ವಾಮಿಗಳೊಂದಿಗೆ ದೇವಸ್ಥಾನಕ್ಕೆ ಬಂದು ಸೇರುವುದು. ಕೊನೆಯ ದಿನವಾದ 20ನೇ ತಾರೀಖಿನಂದು ಗುರುವಾರ ಕಂಕಣ ವಿಸರ್ಜನೆ ನಡೆಯಲಿದೆ.