ದಾವಣಗೆರೆ, ಫೆ.16- ಲೋಕೋಪಯೋಗಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ರಸ್ತೆ ಸಂಚಾರ ಸಮೀಕ್ಷೆಯನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ 139 ಸ್ಥಳಗಳಲ್ಲಿ ನಾಳೆ ದಿನಾಂಕ 17 ರ ಸೋಮವಾರ ಬೆಳಿಗ್ಗೆ 6 ರಿಂದ ಇದೇ ದಿನಾಂಕ 24 ರ ಬೆಳಿಗ್ಗೆ 6 ಗಂಟೆಯವರೆಗೆ ಸತತವಾಗಿ 7 ದಿನಗಳ ಕಾಲ ಸಿ.ಸಿ ಕ್ಯಾಮರ ಮುಖಾಂತರ ವಾಹನ ಸಂಚಾರ ಗಣತಿಯನ್ನು ನಡೆಸಲಾಗುವುದು.
ಈ ಗಣತಿ ಕಾರ್ಯದಿಂದ ರಸ್ತೆಯಲ್ಲಿನ ವಾಹನ ದಟ್ಟಣೆ ಅರಿಯಲು ಹಾಗೂ ಇರುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ಅಗಲೀಕರಣ, ವಾಹನಗಳ ಸಂಚಾರ ಸುಗಮಗೊಳಿಸಲು, ಸಂಚಾರದಲ್ಲಿ ಸುರಕ್ಷತೆ ಉತ್ತಮಪಡಿಸಲು, ಅಪಘಾತ ತಡೆಯಲು ಗಣತಿಯಿಂದ ಸಹಕಾರಿಯಾಗಲಿದೆ. ವಾಹನ ಸವಾರರು ಗಣತಿಗೆ ಸಹಕರಿಸಲು ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.