ಷಾ ವಿರುದ್ಧ ಸುಮೊಟೋ ಕೇಸ್ ದಾಖಲಿಸಲು ದಸಂಸ ಒತ್ತಾಯ

ದಾವಣಗೆರೆ, ಡಿ.26 – ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಎಸ್ಸಿ-ಎಸ್ಟಿ ಕಾಯ್ದೆ ಅಡಿ ಸುಮೊಟೋ ಕೇಸ್ ದಾಖಲಿಸಲು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಅರೆ ಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಜಯದೇವ ವೃತ್ತದಿಂದ ಉಪವಿಭಾಗಾಧಿ ಕಾರಿ ಕಚೇರಿವರೆಗೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ ಡಿಎಸ್‌ಎಸ್ ಕಾರ್ಯಕರ್ತರು, ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕ ಟಿ. ರವಿಕುಮಾರ್ ಅವರು, ಅಂಬೇಡ್ಕರ್ ಅವರ ಹೆಸರು ಪ್ರಸ್ತಾಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಆಡಿದ ಮಾತು ಅಂಬೇಡ್ಕರ್ ಅವರಿಗೆ ಅಷ್ಟೇ ಅಲ್ಲ. ಇಡೀ ಸಂವಿ ಧಾನಕ್ಕೆ ಮತ್ತು ದೇಶದ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ  ಎಂದರು.

ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ಮಾತನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ. ರವಿ ಕೆಟಿಜೆ ನಗರ, ಕೆಂಚಮ್ಮನಹಳ್ಳಿ ರುದ್ರೇಶ್, ಜಿಲ್ಲಾ ಖಜಾಂಚಿ ಹೆಚ್. ಮಲ್ಲಿಕಾರ್ಜುನ್, ಕೃಷ್ಣಪ್ಪ ಹರಿಹರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!