2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಸಿಂಗ್ ಅವರು ಮೇ 22, 2004 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು ಮತ್ತು 2009ರಲ್ಲಿ ಅದೇ ದಿನಾಂಕದಂದು ಮತ್ತೊಮ್ಮೆ ಪ್ರಧಾನಿಯಾಗಿ 2 ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದರು.
ಸಿಂಗ್ ಅವರ ರಾಜಕೀಯ ಜೀವನು 1991ರಲ್ಲಿ ಅವರು ರಾಜ್ಯಸಭೆಗೆ ಪ್ರವೇಶಿಸಿದಾಗ ಪ್ರಾರಂಭವಾಯಿತು. ಕೇವಲ ನಾಲ್ಕು ತಿಂಗಳ ನಂತರ, ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು, ಇದು ಭಾರತದ ಆರ್ಥಿಕತೆಯಲ್ಲಿ ಪರಿವರ್ತನೆಗೆ ಕಾರಣವಾಗಿತ್ತು.
1990 ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಮನಮೋಹನ್ ಸಿಂಗ್ ಹೊಸ ದಿಕ್ಕು ತೋರಿಸಿ ದ್ದರ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.
6 ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಸಿಂಗ್, ಒಮ್ಮೆಯೂ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಲಿಲ್ಲ. 1999 ರಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಿಂಗ್, ಬಿಜೆಪಿಯ ವಿಜಯ್ ಕುಮಾರ್ ಮಲ್ಹೋತ್ರ ವಿರುದ್ಧ ಪರಾಭವಗೊಂಡಿದ್ದರು.
ಅಸ್ಸಾಂ ನಿಂದ 5 ಬಾರಿ ಹಾಗೂ ಅಲ್ಪಾವಧಿಗೆ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1998 ರಿಂದ 2004 ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಹೊಂದಿದ್ದರು.
ಆರ್.ಬಿ.ಐ. ಗವರ್ನರ್ ಆಗಿ ಸೇವೆ ಸಲ್ಲಿಸಿದ್ದ ಮನಮೋಹನ್ ಸಿಂಗ್ : 1932 ರ ಸೆ.26 ರಂದು ಅಂದಿನ ಅವಿಭಜಿತ ಭಾರತದಲ್ಲಿ ಜನಿಸಿದ ಡಾ. ಮನಮೋಹನ್ ಸಿಂಗ್, 1972 ರಲ್ಲಿ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ 1982-1985 ಅವಧಿಯಲ್ಲಿ ಆರ್ ಬಿಐ ಗವರ್ನರ್ ಆಗಿಯೂ ಕಾರ್ಯನಿರ್ವಹಿಸಿದ್ದರು.