ದಾವಣಗೆರೆ, ಡಿ.26- ಸರ್ಕಾರದ 6ನೇ ಗ್ಯಾರಂಟಿ ಸ್ಲಂ ನಿವಾಸಿಗಳ ವಸತಿ ಯೋಜನೆಗೆ ಹಣ ಮಂಜೂರು ಮಾಡಿರುವುದು ಸ್ಲಂ ಜನರು ನಡೆಸಿದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಮುಂದಾಗಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಒತ್ತಾಯಿಸಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಮತ ವಸತಿ ಹಕ್ಕಿಗಾಗಿ ಹಾಗೂ ಸ್ಲಂ ಜನರ ವಿಮೋಚನೆಗಾಗಿ ಎಂಬ ಜಾಗೃತಿಯೊಂದಿಗೆ ರಾಜ್ಯಾದ್ಯಂತ ಸ್ಲಂ ಜನರಲ್ಲಿ ಜಾಗೃತಿ ಕೈಗೊಂಡ ಪರಿಣಾಮ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಹಾಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 21-12-2023 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಕೊಳಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕೆ 6,170 ಕೋಟಿ ಬೃಹತ್ ಪ್ರಮಾಣದ ಅನುದಾನ ಮಂಜೂರು ಮಾಡಿ, ಫಲಾನುಭವಿಗಳ ವಂತಿಕೆ ಹಣವನ್ನು ಸರ್ಕಾರವೇ ಪಾವತಿಸಲು ಮುಂದಾಗಿರುವುದನ್ನು ಸ್ಲಂ ಜನಾಂದೋಲನ – ಕರ್ನಾಟಕದಿಂದ ಸ್ವಾಗತಿಸುತ್ತದೆ ಎಂದು ರೇಣುಕಾ ಯಲ್ಲಮ್ಮ ತಿಳಿಸಿದ್ದಾರೆ.