ಕಾಂತರಾಜ್ ಆಯೋಗದ ವರದಿ ಜಾರಿಗೆ ಹಿಂದುಳಿದ ವರ್ಗಗಳ ಒಕ್ಕೂಟದ ಆಗ್ರಹ

ದಾವಣಗೆರೆ, ಡಿ. 21- ಜಾತಿಗಣತಿಗಾಗಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ಕಾಂತರಾಜ್ ಆಯೋಗದ ವರದಿ ಜಾರಿ ಮಾಡುವಂತೆ ಹೊನ್ನಾಳಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಣಜಾರ ಸಮಾಜದ ತಾಲ್ಲೂಕು ಅಧ್ಯಕ್ಷ ಡಾ. ಈಶ್ವರನಾಯ್ಕ ಅವರು, ಕಾಂತರಾಜ್ ಆಯೋಗದ ವರದಿಯನ್ನು ಗೌಪ್ಯವಾಗಿಟ್ಟು ವರದಿ ಜಾರಿ ಮಾಡುವುದಕ್ಕೆ ನಮ್ಮ ವಿರೋಧವಿದೆ. ಜಾತಿಗಣತಿ ವರದಿ ಸಲ್ಲಿಕೆಗೂ ಮುಂಚೆ ಕೆಲವರು ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಸರ್ಕಾರದ ವರದಿ ಪಡೆದು  ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕು. ಎಲ್ಲಾ ಸಚಿವರು, ಶಾಸಕರೊಂದಿಗೆ ಚರ್ಚೆ ಮಾಡಬೇಕು ಹಾಗೂ ವರದಿಯಲ್ಲಿರುವ ಅಂಶಗಳ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ವರದಿಯಲ್ಲಿ ತಪ್ಪುಗಳಿದ್ದರೆ ಪರಿಶೀಲನೆ ನಡೆಸಬೇಕು. ಆದರೆ ವರದಿ ಸಲ್ಲಿಕೆಗಿಂತ ಮೊದಲೇ ವರದಿ ಜಾರಿಗೆ ವಿರೋಧ ಮಾಡುವುದು ಅತ್ಯಂತ ಖಂಡನೀಯ ಎಂದರು. ಮುಖ್ಯಮಂತ್ರಿಗಳೂ ಸಹ ವರದಿಯ ಬಗ್ಗೆ ವಿಮರ್ಶೆ ಮಾಡಿ ವರದಿ ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ವರದಿ ಜಾರಿಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಕಾಂತರಾಜ್ ವರದಿಯಿಂದ ಶೋಷಿತ ಸಮುದಾಯಗಳಿಗೆ ಒಳಿತಾಗಲಿದೆ. ವರದಿ ಬಹಿರಂಗಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪತ್ರಕಾಗೋಷ್ಠಿಯಲ್ಲಿ ವಿವಿಧ ಸಮುದಾಯದ ಮುಖಂಡರಾದ ನಾಗರಾಜಪ್ಪ, ಹೆಚ್.ವಿ. ಶಿವಯೋಗಿ, ಬಿ. ಸಿದ್ಧಪ್ಪ, ಜಿ.ಹೆಚ್. ತಮ್ಮಣ್ಣ, ಎಂ. ರಮೇಶ, ಪಾಲಾಕ್ಷಪ್ಪ, ಲಿಂಗರಾಜ್, ಎಂ.ಎನ್.ಪಾಲಾಕ್ಷಪ್ಪ ಉಪಸ್ಥಿತರಿದ್ದರು. 

error: Content is protected !!