ದಾವಣಗೆರೆ, ಡಿ. 18- ನಗರದಲ್ಲಿ ಇದೇ ದಿನಾಂಕ 23 ಮತ್ತು 24 ರಂದು ಎರಡು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾದ 24 ನೇ ಮಹಾ ಅಧಿವೇಶನಕ್ಕೆ ನೊಳಂಬ ವೀರಶೈವ ಸಮಾಜದ ಯಾವುದೇ ಸ್ವಾಮೀಜಿಯವರು, ಮುಖಂಡರನ್ನು ಆಹ್ವಾನಿಸದಿರುವುದರ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಅಧಿವೇಶನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ನೊಳಂಬ ವೀರಶೈವ ಸಮಾಜದ ಮುಖಂಡ ಶಾಂತರಾಜ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೊಳಂಬ ವೀರಶೈವ ಸಮಾಜ ಎಂಟನೇ ಶತಮಾನದ ಹಿಂದೆಯೇ ಸ್ಥಾಪಿತವಾದಂತಹ ಇತಿಹಾಸ ಹೊಂದಿರುವ ಮಠ. ರಾಜ್ಯದಲ್ಲಿ 12 ಪೀಠ, 25 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜವನ್ನು ಅಧಿವೇಶನಕ್ಕೆ ಆಹ್ವಾನಿಸದಿರುವುದು ಇಡೀ ಸಮಾಜಕ್ಕೆ ನೋವುಂಟು ಮಾಡಿದೆ. ಹಾಗಾಗಿ ಅಧಿವೇಶನ ಬಹಿಷ್ಕರಿಸುವುದಾಗಿ ನಿರ್ಧರಿಸಿದ್ದು, ನೊಳಂಬ ಸಮಾಜ ಬಾಂಧವರು ಯಾರೂ ಸಹ ಭಾಗವಹಿಸಬಾರದು ಎಂದು ಮನವಿ ಮಾಡಿದರು.
ಹರಿಹರ ತಾಲ್ಲೂಕು ನಂದಿಗುಡಿಯಲ್ಲಿರುವ ನೊಳಂಬ ವೀರಶೈವ ಸಮಾಜದ ಮಠ ಭವ್ಯ ಪರಂಪರೆ ಹೊಂದಿದೆ. ಉಕ್ಕಡಗಾತ್ರಿಯ ಶ್ರೀ ಕರಿಬಸವಯ್ಯ, ಅಜ್ಜಯ್ಯ, ಕೆಂಚ ವೀರೇಶ್ವರ ಸ್ವಾಮೀಜಿ ಒಳಗೊಂಡಂತೆ 12 ಮಠಗಳ ಯಾವುದೇ ಸ್ವಾಮೀಜಿಗಳನ್ನು ಆಹ್ವಾನಿಸದೇ ಕಡೆಗಣಿಸಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂದಿಗುಡಿಯ ಮಠ ವೀರಶೈವ ಮಠಗಳ ಮೂಲ ಮಠಗಳಲ್ಲಿ ಒಂದಾಗಿದೆ. ಅಧಿವೇಶನಕ್ಕೆ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರರಿಗೆ ಆಹ್ವಾನ ನೀಡದೇ ಇರುವುದು ಮೂಲ ಮಠಕ್ಕೆ ಮಾಡಿರುವ ಘೋರ ಅಪಮಾನ. ಈ ಎಲ್ಲಾ ಹಿನ್ನೆಲೆಯಲ್ಲಿ ಅಧಿವೇಶನ ಬಹಿಷ್ಕರಿಸಲು ಸಮಾಜ ತೀರ್ಮಾನಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ವಿ. ಮಹೇಂದ್ರ, ಸಿ.ಬಿ. ಈಶ್ವರಪ್ಪ, ಹಿಂಡಸಘಟ್ಟೆ ಮುರುಗೇಶಪ್ಪ, ಜಿ.ವಿ.ಭೋಜರಾಜ್, ಕೆ.ಜಿ. ರಂಗನಗೌಡ್ರು, ಎನ್.ಎಂ. ರಾಜು, ಬಿ.ಮಂಜು, ರಾಜಪ್ಪ ಮತ್ತಿತರರಿದ್ದರು.