ಅಕ್ಕಮಹಾದೇವಿ ಆದರ್ಶ ಪ್ರತಿ ಮಹಿಳೆಗೂ ಸ್ಫೂರ್ತಿ

ಅಕ್ಕಮಹಾದೇವಿ ಆದರ್ಶ ಪ್ರತಿ ಮಹಿಳೆಗೂ ಸ್ಫೂರ್ತಿ

ಅಕ್ಕಮಹಾದೇವಿ ಜಯಂತ್ಯೋತ್ಸವದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಏ. 7- ಹನ್ನೆರಡನೇ ಶತಮಾನದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸಿದ ಅಕ್ಕಮಹಾದೇವಿ ಕನ್ನಡ ಸಾಹಿತ್ಯದಲ್ಲಿ ವಚನಗಳನ್ನು ಬರೆದ ಮೊದಲ ಮಹಿಳೆ ಎಂದು ಹೇಳಲಾಗುತ್ತಿದ್ದು, ಅವರು ನಮ್ಮೆಲ್ಲರಿಗೂ ಆದರ್ಶ ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ
ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ನಿನ್ನೆ ಏರ್ಪಾಡಾಗಿದ್ದ ಶ್ರೀ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಕಮಹಾದೇವಿ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಇತಿಹಾಸಕ್ಕೆ ಸ್ಫೂರ್ತಿದಾಯಕ ಮಹಿಳೆಯಾಗಿ ಕಾಣಿಸಿಕೊಂಡಿದ್ದಾಳೆ ಎಂದು ಅವರು ಹೇಳಿದರು.

ಅಕ್ಕಮಹಾದೇವಿ ಸಮಾಜ ಕೂಡ ಹಿರಿಯರ ಶ್ರಮದಿಂದ ಮಹಾಮನೆಯಾಗಿ ಬೆಳೆದು ನಿಂತಿದೆ. ಮಹಿಳೆಯರ ಸಬಲೀಕರಣ, ಸ್ವಯಂ ಉದ್ಯೋಗ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿದೆ. ಅಕ್ಕಮಹಾದೇವಿ ಸಮಾಜದಿಂದ ಉತ್ಪಾದಿಸಲ್ಪಡುವ ರೊಟ್ಟಿ, ಚಟ್ನಿಪುಡಿ ಸೇರಿದಂತೆ ಇನ್ನಿತರೆ ತಿನಿಸುಗಳು ದೇಶ-ವಿದೇಶಗಳ ಗಮನ ಸೆಳೆದಿವೆ ಎಂದರು.

ಜಾಲಿನಗರ, ರಾಜೀವಗಾಂಧಿ ಬಡಾವಣೆಯ ಶ್ರೀ ಅಕ್ಕಮಹಾದೇವಿ ಶಿಶುಪಾಲನಾ ಕೇಂದ್ರದ ಪುಟಾಣಿಗಳ ವೇಷಭೂಷಣ ವೀಕ್ಷಿಸಿದ ಪ್ರಭಾ ಅವರು, ತಾವು ಬಾಲ್ಯದಲ್ಲಿ ಬಸವಣ್ಣ, ಭಗತ್‌ಸಿಂಗ್ ಮುಂತಾದ ಆದರ್ಶ ಪುರುಷರ ಗೆಟಪ್‌ನಲ್ಲಿ ಗಮನ ಸೆಳೆದಿದ್ದನ್ನು ಸ್ಮರಿಸಿಕೊಂಡರು.

ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳೆಯರು ಕ್ಯಾನ್ಸರ್ ಬಗ್ಗೆ ತಪಾಸಣೆ ಮಾಡಿಸಿ
ಕೊಳ್ಳಬೇಕು. ಪ್ರತಿಯೊಬ್ಬರೂ ಸಹ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕೆಂದರು.

ಸೋಮೇಶ್ವರ ವಿದ್ಯಾಲಯದ ಪ್ರಾಂಶುಪಾಲರಾದ ಹೆಚ್.ವಿ. ವೀಣಾ `ಅಕ್ಕಮಹಾದೇವಿ’ ಕುರಿತು ಮಾತನಾಡಿದರು. ಇದೇ ವೇಳೆ ಯಮ್ಮಿ ಶಾರದಮ್ಮ ಇವರಿಗೆ `ಅಕ್ಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕಂಚೀಕೆರೆ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ನೇತ್ರ ತಜ್ಞ ಡಾ. ಎ.ಬಿ. ಕಾಕಡೆ, ಜಾನಪದ ಕಲಾವಿದೆ ಚಂದ್ರಕಲಾ ಹಾರಕೋಡ್, ಶ್ರೀ ಅಕ್ಕಮಹಾದೇವಿ ವಧು-ವರರ ಅನ್ವೇಷಣಾ ಕೇಂದ್ರದ ಅಧ್ಯಕ್ಷೆ ಉಮಾ ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಅಕ್ಕಮಹಾದೇವಿ ಸಮಾಜದ ಸದಸ್ಯೆಯರು ಪ್ರಾರ್ಥಿಸಿದರು. ಕಾರ್ಯದರ್ಶಿ ದೊಗ್ಗಳ್ಳಿ ಸುವರ್ಣಮ್ಮ ಸ್ವಾಗತಿಸಿದರು. ಜ್ಯೋತ್ಸ್ನಾ ಶ್ರೀಕಂಠ್,  ಸುನೀತಾ ಇಂದುಧರ ನಿರೂಪಿಸಿದರು. ಉಪಾಧ್ಯಕ್ಷೆ ಜಯಮ್ಮ ನೀಲಗುಂದ ಶರಣು ಸಮರ್ಪಿಸಿದರು. 

ಶೋಭಾ ಕಣವಿ, ಮಂಜುಳಾ ಕಾಯಿ, ಶಾಂತ ಯಾವಗಲ್, ವಿಜಯ ಬಸವರಾಜ್, ರಾರಾವಿ ಪುಷ್ಪ ಅತಿಥಿಗಳನ್ನು ಪರಿಚಯಿಸಿದರು. ಜಯದೇವಮ್ಮ, ಸುಧಾ ಅಜ್ಜಂಪುರ, ಪುಷ್ಪ ಐನಳ್ಳಿ ಬಹುಮಾನ ವಿತರಣೆ ನಡೆಸಿಕೊಟ್ಟರು. 

error: Content is protected !!