ದಾವಣಗೆರೆ, ಮಾ.24- ಬಿಜೆಪಿಯಿಂದ ನಗರದಲ್ಲಿ ನಡೆಯುವುದು ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭವಲ್ಲ, ಭ್ರಷ್ಟರ ಮಹಾಸಂಗಮ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಶುಕ್ರವಾರ ನಗರದ ಜಯದೇವ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಾಡಾಗಿದ್ದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಹಾಕಿದರು.
ಸರ್ಕಾರದಲ್ಲಿರುವ ಬಹುತೇಕ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜಿಲ್ಲಾ ಉಸ್ತು ವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ಅವರುಗಳು ತಲಾ ಶೇ.20 ರಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ದೂರಿದರು.
ಇಂತಹ ಭ್ರಷ್ಟಚಾರವನ್ನು ಕಂಡು ಕಾಣ ದಂತಿರುವ ಪ್ರಧಾನಿ ನರೇಂದ್ರ ಮೋದಿಯ ವರನ್ನು ಕರೆಸಿ ಭ್ರಷ್ಟರ ಮಹಾಸಂಗಮ ನಡೆ ಸುತ್ತಿದ್ದಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ರಾಜ್ಯದ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದ್ದು, ರಾಜ್ಯದ ಜನತೆಗೆ ಮಂಕುಬೂದಿ ಎರಚಿ ಅನ್ಯಾಯ ಎಸಗಿರುವ ಬಿಜೆಪಿಗರಿಗೆ ಯಾವ ಮುಖ ಹೊತ್ತುಕೊಂಡು ಚುನಾವಣೆ ಎದುರಿಸಬೇಕೆಂಬ ಗೊಂದಲದಲ್ಲಿದ್ದಾರೆ ಎಂದು ಟೀಕಿಸಿದರು.
ನಾ ಕಾವೂಂಗಾ ಎನ್ನುವ ಮೋದಿಯವರು ಶೇ.40 ರಷ್ಟು ಭ್ರಷ್ಟ ಸರ್ಕಾರವನ್ನು ಬೆಂಬಲಿಸು ತ್ತಿರುವುದನ್ನು ನೋಡಿದರೆ, ರಾಜ್ಯ ಸರ್ಕಾರದ ಭ್ರಷ್ಟಾಚಾರದಲ್ಲಿ ಮೋದಿಯವರಿಗೂ ಪಾಲು ಇದೆಯೇ? ಎಂದು ಪ್ರಶ್ನಿಸಿದ ಅವರು, ಮೋದಿ ಹೆಸರಲ್ಲಿ ಮತ ಕೇಳಲು ಮುಂದಾಗಿರುವ ರಾಜ್ಯ ಬಿಜೆಪಿಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಬಸವಂತಪ್ಪ, ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಮುಖಂಡರಾದ ಕೆ.ಜಿ ಶಿವಕುಮಾರ್, ಎ.ನಾಗರಾಜ್, ಕೆ.ಎನ್ ಮಂಜುನಾಥ್, ಅನಿತಾಬಾಯಿ, ಸುಷ್ಮಾ ಪಾಟೀಲ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಜಯಣ್ಣ, ತಕ್ಕಡಿ ಮಂಜುನಾಥ್, ಹೆಚ್.ಕೆ ಚಂದ್ರಶೇಖರ್, ಮಹಮ್ಮದ್ ಸಮೀಉಲ್ಲಾ, ಜಮ್ನಳ್ಳಿ ನಾಗರಾಜ್, ಗುರುರಾಜ್, ಹರೀಶ್ ಬಸಾಪುರ ಮತ್ತಿತರರಿದ್ದರು.