ಪ್ರಧಾನಿ ಕಾರ್ಯಕ್ರಮಕ್ಕೆ 10 ಲಕ್ಷ ಜನ ನಿರೀಕ್ಷೆ

ಪ್ರಧಾನಿ ಕಾರ್ಯಕ್ರಮಕ್ಕೆ 10 ಲಕ್ಷ ಜನ ನಿರೀಕ್ಷೆ

ನಗರದಲ್ಲಿನ ಮಹಾಸಂಗಮ ಸಮಾವೇಶದ ಸ್ಥಳ ಪರಿಶೀಲಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ, ಮಾ.15- ಇದೇ ಮಾರ್ಚ್ 25ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು,  ಜಿ.ಎಂ.ಐ.ಟಿ. ಪಕ್ಕದಲ್ಲಿ ಮಹಾ ಸಂಗಮ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಈ ಹಿನ್ನೆಲೆಯಲ್ಲಿ 450 ಎಕರೆ ಪ್ರದೇಶದಲ್ಲಿ ಮೋದಿ ಕಾರ್ಯಕ್ರಮಕ್ಕಾಗಿ ನಡೆಯುತ್ತಿರುವ ಸಿದ್ಧತೆಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಬುಧವಾರ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ರಾಜ್ಯದ ನಾಲ್ಕು ಬಿಜೆಪಿ ರಥಯಾತ್ರೆಗಳು ದಾವಣಗೆರೆಗೆ ಆಗಮಿಸಲಿವೆ. ಶಿವಮೊಗ್ಗದಿಂದ ಬರುವ ರಥ ಯಾತ್ರೆ ಹೊನ್ನಾಳಿ. ರಾಣೇಬೆನ್ನೂರಿನಿಂದ ಬರುವ ರಥ ಯಾತ್ರೆ ಹರಿಹರಕ್ಕೆ. ಬಳ್ಳಾರಿಯಿಂದ ಬರುವ ರಥ ಯಾತ್ರೆ ಜಗಳೂರಿಗೆ. ಬೆಂಗಳೂರಿನಿಂದ ಬರುವ ರಥ ಯಾತ್ರೆ ಆನಗೋಡಿಗೆ ಬರಲಿವೆ. ಇವೆಲ್ಲವೂ 25ರಂದು ದಾವಣಗೆರೆಯಲ್ಲಿ ಅಂತ್ಯಗೊಂಡು ಮಹಾ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದರು.

ಸುಮಾರು ಹತ್ತು ಲಕ್ಷ ಜನರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಸಿದ್ದೇಶ್ವರ ಹೇಳಿದರು.

ಬಿಜೆಪಿ ಬಿಟ್ಟು ಯಾರೂ ಹೋಗಲ್ಲ: ಈಗಾಗಲೇ ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಹೇಳಿದ್ದಾರೆ. ಹಾಗೆಯೇ  ಬಿಜೆಪಿ ಬಿಟ್ಟು ಯಾರೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಸಂಸದರು ಹೇಳಿದರು.

ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ನಾಯಕರಿಂದ ಟಿಕೆಟ್ ಘೋಷಣೆ ಆಗಬೇಕು.  ಅವರು ಯಾರಿಗೆ ಟಿಕೆಟ್ ನೀಡುತ್ತಾರೋ ಎಂಬುದು ಯಾರಿಗೂ ಗೊತ್ತಿಲ್ಲ. ಮುಖ್ಯಮಂತ್ರಿಗಳಿಗೂ ಗೊತ್ತಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಚುನಾವಣಾ ಘೋಷಣೆ ನಂತರ ಕೋರ್ ಕಮಿಟಿ ಸಭೆ ನಡೆದ ನಂತರವೇ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಕಾರ್ಯಕರ್ತ ರನ್ನು ಚುನಾವಣೆಗೆ ಹುರಿ ದುಂಬಿಸುವ ಕೆಲಸವನ್ನು ಕಾರ್ಯಕ್ರಮದಲ್ಲಿ ಮೋದಿ ಅವರು ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗಿದೆ. ಸುಮಾರು 450 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, 200 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ನಡೆದರೆ, 250 ಎಕರೆ ವಾಹನಗಳ ನಿಲುಗಡೆಗೆ ಮೀಸಲಿರಿಸಲಾಗಿದೆ ಎಂದರು.

ಸಂಸದ ಜಿಎಂ ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್, ವಿಭಾಗೀಯ ಪ್ರಭಾರಿ ನವೀನ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಇತರರು ಇದ್ದರು.

error: Content is protected !!