ಸಿರಿಧಾನ್ಯ ಪ್ರಾಣಿಗಳ ಆಹಾರವೆಂದು ನಂಬಿಸಿ ಮೋಸ

ಸಿರಿಧಾನ್ಯ ಪ್ರಾಣಿಗಳ ಆಹಾರವೆಂದು ನಂಬಿಸಿ ಮೋಸ

ದೇಶೀ ಆಹಾರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ.ಖಾದರ್ ವಲಿ

ದಾವಣಗೆರೆ, ಮಾ.13- ಆಧುನಿಕ ದಿನಗಳಲ್ಲಿ ರೈತರನ್ನು ರೈತರಾಗಿ ಉಳಿಸಿಲ್ಲ, ರೈತರನ್ನ ಗುಲಾಮರಾಗಿ, ಕೂಲಿಗಳಾಗಿ ಉಳಿಸುವ ಸಂಚನ್ನು ಹರಿತ ವಿಪ್ಲವ ಆಹಾರ ಉತ್ಪಾದನಾ ವಲಯದ ಸೃಷ್ಟಿಸಿದೆ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಗೂ ಸಿರಿಧಾನ್ಯ ಸಂತ ಎಂದೇ ಖ್ಯಾತಿ ಪಡೆದ ಡಾ.ಖಾದರ್ ವಲಿ ಹೇಳಿದರು.

ಸೋಮವಾರ ನಗರದ ಡಾ.ಸದ್ಯೋ ಜಾತ ಶಿವಾಚಾರ್ಯ ಹಿರೇಮಠದ ಆವರಣದಲ್ಲಿ ದೇಸಿ ಆಹಾರ ಸಂಪೂರ್ಣ ಆರೋಗ್ಯ ಸಿರಿಧಾನ್ಯಗಳು ಮತ್ತು ಕಷಾಯಗಳ ಕುರಿತು ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳಿಂದ ಭಾರತದಲ್ಲಿ ಸಿರಿಧಾನ್ಯ ಬೆಳೆಯಲಾ ಗುತ್ತಿತ್ತು, ಇವುಗಳ ಸೇವನೆಯಿಂದ ಯಾವುದೇ ಖಾಯಲೆ ಹರಡುತ್ತಿರಲಿಲ್ಲ. ಸಿರಿಧಾನ್ಯ ಪ್ರಾಂತೀಯ ಆಹಾರವಲ್ಲದೆ, ವಿಶ್ವದ ಆಹಾರವು ಹೌದು. ಆದರೆ, ಇದನ್ನು ಪ್ರಾಣಿಗಳು ತಿನ್ನುವ ಆಹಾರ ವೆಂದು ಜನರನ್ನು ನಂಬಿಸಿ ಮೋಸ ಮಾಡಿದ್ದಾರೆ. ದೇಶೀ ಆಹಾರ ಬಿಟ್ಟು ವಿದೇಶಿ ಆಹಾರಕ್ಕೆ ಒಗ್ಗಿಕೊಳ್ಳುವಂತೆ ವ್ಯವಸ್ಥೆಯ ಮೂಲಕ ಜನರ ಮೇಲೆ ಒತ್ತಡ ಹೇರಲಾಗಿದೆ. ಸಾವಿರಾರು ಕೋಟಿ ರೂ.ಗಳನ್ನು ಗೊಬ್ಬರದ ಮೂಲಕ ಬಂಡವಾಳಶಾಹಿಗಳಿಗೆ ಕಟ್ಟುವುದಲ್ಲದೇ, ಆಹಾರ ಕ್ರಮ ಬದಲಿಸಿ ಔಷದಿಯ ಮುಖಾಂತರವು ವ್ಯಯ ಮಾಡುತ್ತಿದ್ದೇವೆ ಎಂದರು.

ಗರಿಕೆಯ ಹುಲ್ಲಿನ ಕಷಾಯ ಸೇವನೆಯಿಂದ ಸಾಂಕ್ರಾಮಿಕ ರೋಗ ಹರಡುವುದಿಲ್ಲ. ಸಾವಯವ ಅಕ್ಕಿಯ ನಾರಿನ ಅಂಶದಲ್ಲಿ ದೇಹದ ಅನೇಕ ಭಾಗಗಳಿಗೆ ಶಕ್ತಿ ನೀಡುವ ಪೋಷಕಾಂಶಗಳಿವೆ. ಆದರೆ, ನಾವು ದೇಸಿಯ ಆಹಾರ ಪದ್ಧತಿ ತ್ಯಜಿಸಿದ್ದೇವೆ ಎಂದ ಅವರು, ಕೇವಲ ಆರು ತಿಂಗಳ ಕಾಲ ಭತ್ತದ ಅಕ್ಕಿ, ಗೋಧಿ, ಸಕ್ಕರೆ ಸೇವನೆ ಕಡಿಮೆ ಮಾಡಿದರೆ ಆರು ತಿಂಗಳಲ್ಲಿ ಬಿ.ಪಿ, ಶುಗರ್‌, ಡಯಾ ಬಿಟಿಸ್‌ನಂತಹ ಅನೇಕ ಖಾಯಿಲೆಗಳನ್ನು ಜಗತ್ತಿನಲ್ಲಿ ಇಲ್ಲದಂತೆ ಮಾಯ ಮಾಡ ಬಹುದು ಎಂದು ಸಲಹೆ ನೀಡಿದರು.

ಆರು ಸಾವಿರ ಪ್ರಭೇದದ ಸಿರಿಧಾನ್ಯದ ಹುಲ್ಲುಗಾವಲುಗಳಿದ್ದವು, ಅದರಲ್ಲಿ ಇನ್ನೂರು ಜಾತಿಯ ಕಣ್ಣಿಗೆ ಕಾಣಿಸುವ ಧಾನ್ಯಗಳಿದ್ದವು. ವೈವಿಧ್ಯಮಯ ಹಾಗೂ ವೈಜ್ಞಾನಿಕವಾದ ಪೋಷಕಾಂಶ ಗುಣಗಳು ಇದರಲ್ಲಿದ್ದವು. ಆಧುನಿಕ ಯುಗದಲ್ಲಿ ನೀರಾವರಿಯಲ್ಲಿ ಬೆಳೆಯುವ ಭತ್ತಕ್ಕೆ ರಾಸಯನಿಕ ಗೊಬ್ಬರ ಬಳಸಿ ಹೆಚ್ಚು ಇಳುವರಿ ಪಡೆದು ಜನರ ಆಲೋಜನೆ ಬದಲಿಸಿ, ಸಿರಿಧಾನ್ಯದ ಬೆಳೆಯುವ ಕೃಷಿವಲಯವನ್ನು ಕುಗ್ಗಿಸಲಾಯಿತು ಎಂದು ಕಿಡಿಕಾರಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್ ಮಾತನಾಡಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ 25 ಸಾವಿರಕ್ಕೂ ಅಧಿಕ ರೈತರಿಂದ ಇತ್ತಿಚೀನ ದಿನಗಳಲ್ಲಿ 10ಕೋಟಿಗೂ ಅಧಿಕ ವಹಿವಾಟು ನಡೆದಿದೆ. ಬಿಳಿಯ ಬಣ್ಣದ ಆಹಾರಕ್ಕೆ ಒಗ್ಗಿಕೊಂಡು, ಸತ್ವಯುತ ಆಹಾರ ಕಡೆಗಣಿಸಿದ್ದೇವೆ ಎಂದರು.

ಪ್ರಾಸ್ತವಿಕವಾಗಿ ಉಪ ಕೃಷಿ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಮಾತನಾಡಿ, ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷಚಾರಣೆ ಹಿನ್ನಲೆ ಸಿರಿಧಾನ್ಯ ಬೆಳೆಯುವ ರೈತರ ಜಮೀನಿಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷತೆ ನಡೆಸುತ್ತಿದ್ದೇವೆ. ಬೆಳೆಯುವವರು, ಬೆಳೆಸುವವರು, ಕೊಳ್ಳುವವರ ಒಳಗೊಳ್ಳುವಿಕೆ ಇದ್ದರೆ ಸಿರಿಧಾನ್ಯ ಬಳಕೆ ಹಾಗೂ ಉತ್ಪಾದನೆ ಸಾಧ್ಯ ಎಂದರು.

ಈ ವೇಳೆ ಪಂಚರತ್ನ ಸಿರಿಧಾನ್ಯಗಳ ಮಿಶ್ರಣ ಉತ್ಪನ್ನ ಬಿಡುಗಡೆಗೊಳಿಸಿದರು. ಉತ್ಪನ್ನದಲ್ಲಿ ಸಾಮೆ, ನವಣೆ, ಹಾರಕ, ಊದಲು ಮತ್ತು ಕೊರಲೆಗಳ ಪ್ರತ್ಯೇಕ ಎರಡು ನೂರು ಗ್ರಾಂಗಳಲ್ಲಿ ಒಳಗೊಂಡ ಒಟ್ಟು ಕೆ.ಜಿಯ ಸಿರಿಧಾನ್ಯಗಳ ಮಿಶ್ರಣವಿದೆ.

ಇದೇ ಸಂದರ್ಭದಲ್ಲಿ ಪ್ರಾಂತೀಯ ಸಾವಯವ ಒಕ್ಕೂಟದ ಅಧ್ಯಕ್ಷ ಟಿ. ಕೃಪ, ಸಿಇಒ ಕರಿಯಪ್ಪ, ಆನಂದ್ ಪಾಟೀಲ್‌ ಸೇರಿದಂತೆ ಮತ್ತಿತರರಿದ್ದರು.

error: Content is protected !!