ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಜಗಳೂರು, ಮಾ.10- ಬಿಜೆಪಿ ಆಡಳಿತದಿಂದ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ದಕ್ಕೆ ಬಂದಿದೆ. ಅವರಿಗೆ ಸಂವಿಧಾನ, ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ `ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘ ಪರಿವಾರದ ಗೋಲ್ವಾಲ್ಕರ್, ಸಾವರ್ಕರ್ ರವರ ಸಾಮಾಜಿಕ ನ್ಯಾಯ, ಸಂವಿ ಧಾನದ ಒಂದೂ ಹೇಳಿಕೆಗಳಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಧರ್ಮಾತೀತ, ಜಾತ್ಯತೀತ ಸಮಾನತೆಯ ವಿರುದ್ಧ ಸಂಘ ಪರಿವಾರವಿದೆ. ವಿವೇಕಾನಂದರ ಹೇಳಿಕೆಯಂತೆ ಪುರೋಹಿತ ಶಾಹಿ, ಮನುವಾದಿಗಳು ದೇಶಕ್ಕೆ ಶಾಪ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಶೇ.17.15, ಪರಿಶಿಷ್ಟ ವರ್ಗ 6.95 ಸೇರಿ ಶೇ.24.1 ರಷ್ಟು ಪರಿಶಿಷ್ಟ ಸಮುದಾಯದವರು ವಾಸವಾಗಿ ದ್ದಾರೆ. ನಾನು ಮುಖ್ಯಮಂತ್ರಿಯಾದ ನಂತರ ವಿವಿಧ ಸಮುದಾಯಗಳ ಜನಸಂಖ್ಯೆ ಗಳಿಗನುಗುಣವಾಗಿ ಎಸ್ಇಪಿ, ಟಿಎಸ್ಪಿ ಕಾನೂನು ಜಾರಿಗೊಳಿಸಿದೆ. ಆದರೆ ಬಿಜೆಪಿ ಯವರು ದೇಶದ ಯಾವ ರಾಜ್ಯದಲ್ಲಿ ಯಾದರೂ ಪರಿಶಿಷ್ಟ ಸಮುದಾಯದ ಪರ ಏಕೆ ಕಾನೂನು ಜಾರಿಗೊಳಿಸಿಲ್ಲ. ಹಾಗಾದರೆ ಸಮುದಾಯದವರು ಏಕೆ ಬಿಜೆಪಿಗೆ ಮತ ನೀಡಬೇಕು? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದೀಜಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವವರು. ಶೋಷಿತರಿಗೆ ಸಾಮಾಜಿಕ ನ್ಯಾಯ ಸಿಕ್ಕಿದೇನಾ? ಬಿಜೆಪಿ ಪಕ್ಷದ ಆಡಳಿತದಲ್ಲಿ 5 ವರ್ಷದಲ್ಲಿ ಪರಿಶಿಷ್ಟ ಸಮುದಾಯದವರಿಗೆ 27 ಸಾವಿರ ಕೋಟಿ ಮಾತ್ರ ಆದರೆ ನಮ್ಮ ಆಡಳಿತಾವಧಿಯಲ್ಲಿ 88 ಸಾವಿರ ಕೋಟಿ ಅನುದಾನ. ಇದಜ್ಜೆ ರಾಜಕೀಯ ಇಚ್ಛಾಶಕ್ತಿ ಬದ್ದತೆ ಅಗತ್ಯ ಎಂದರು.
ಜಗಳೂರಿಗೆ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ 15 ಸಾವಿರ ಮನೆಗಳನ್ನು ನೀಡಿದ್ದೆವು. ಅಲ್ಲದೆ ಬಿಜೆಪಿ ಆಡಳಿತ ಸರ್ಕಾರ ನಾವು ಮಂಜೂರು ಮಾಡಿದ ಕಾಮಗಾರಿಗಳ ಉದ್ಘಾಟನೆಗೆ ಸೀಮಿತವಾಗಿದ್ದಾರೆ. ಇಂದಿರಾ ಕ್ಯಾಂಟಿನ್ ಮುಚ್ವಿದ್ದಾರೆ ಬಡವರ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.
ಪಕ್ಷದಲ್ಲಿ ಆಕಾಂಕ್ಷಿಗಳಾಗುವುದು ತಪ್ಪಲ್ಲ ಹೈಕಮಾಂಡ್ನವರು ಟಿಕೆಟ್ ಕೊಟ್ಟ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದು ಪ್ರಮುಖವಾಗಿದೆ.
ಜಗಳೂರು ಕ್ಷೇತ್ರವನ್ನು ಮೂರು ಬಾರಿ ಸಮೀಕ್ಷೆ ನಡೆಸಿದ್ದು, ಯಾರ ಪರ ವರದಿ ಬರುತ್ತದೆ ಅವರಿಗೆ ಟಿಕೆಟ್ ಖಚಿತ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಬಿಜೆಪಿ ಶಾಸಕ ಎಸ್.ವಿ.ರಾಮಚಂದ್ರ ಅವರನ್ನು ಸೋಲಿಸಿ ಎಂದು ಕರೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ, ಬೆಳಗಾಂನಿಂದ ಉದ್ಘಾಟನೆಯಾದ ಪ್ರಜಾಧ್ವನಿ ಕಾರ್ಯಕ್ರಮ ವಿವಿಧ ಜಿಲ್ಲೆಗಳಲ್ಲಿ ಜನತೆಯ ಯಶಸ್ವಿ ಬೆಂಬಲದಿಂದ ಸಂಚರಿಸಿ ಇಂದು ತಮ್ಮ ಕ್ಷೇತ್ರದಲ್ಲಿದೆ. ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷದವರು ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಕಲ್ಪಿಸುವ ಹಾಗೂ ದೇಶಕ್ಕಾಗಿ ತ್ಯಾಗ ಬಲಿದಾನದ ಪ್ರತೀಕದ ಸಿದ್ದಾಂತವಿದೆ. ದೇಶದಲ್ಲಿ ಭ್ರಷ್ಟಾಚಾರದ ಕೂಪದಲ್ಲಿರುವ ಬಿಜೆಪಿಗೆ ಯಾವುದೇ ಸಿದ್ದಾಂತವಿಲ್ಲ. ಅಮಿತ್ ಷಾ, ಮೋದಿ ನೂರು ಬಾರಿ ಕರ್ನಾಟಕಕ್ಕೆ ಆಗಮಿಸಿದರೂ ಬಿಜೆಪಿ ಸೋಲು ಖಚಿತ, ಅಳಿ ತಪ್ಪಿದ ಡಬಲ್ ಇಂಜಿನ್ ಸರ್ಕಾರ ಕಿತ್ತೊಗೆಯಲು ಜನ ಸಂಕಲ್ಪ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಅಧಿಕ ಜನರು ಬೆಂಬಲ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಅಲೆ ಬೀಸಿದೆ. ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಉತ್ತಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಅಗತ್ಯವಿದೆ. ಕಾಂಗ್ರೆಸ್ ಸೋಲಿಗೆ ಕಾರಣ ಕಾಂಗ್ರೆಸ್ ಪಕ್ಷದವರಾಗಿದ್ದು ಟಿಕೆಟ್ ಸಿಗದಿದ್ದವರು ಬೇಸರವಾಗದೆ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಕೈಜೋಡಿಸಬೇಕು ಎಂದು ಆಕಾಂಕ್ಷಿಗಳಿಂದ ವಾಗ್ದಾನ ಪಡೆದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ನಾನು ಶಾಸಕನಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೂ.3330 ಕೋಟಿ ಅನುದಾನ ನೀಡಿ, ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ 57 ಕೆರೆ ತುಂಬಿಸುವ ಯೋಜನೆಗೆ ಸಿರಿಗೆರೆ ಶ್ರೀಗಳ ಆಶೀರ್ವಾದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ರೂ. 250 ಕೋಟಿ ಬಜೆಟ್ನಲ್ಲಿ ಮೀಸಲಿಟ್ಟಿದ್ದು, ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಎಂಬುದನ್ನು ನಾವು ಮರೆಯಬಾರದು ಎಂದರು.
ಜಗಳೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಬಹಳ ಜನ ಆಕಾಂಕ್ಷಿಗಳಿರಬಹುದು. ಆದರೆ ನಾವೆಲ್ಲರೂ ಒಂದೇ ಕುಟುಂಬದವರಾಗಿದ್ದು, ಯಾರಿಗೆ ಟಿಕೆಟ್ ಸಿಗಲಿ ಮುಂದಿನ ಭವಿಷ್ಯಕ್ಕಾಗಿ ವೈಮನಸ್ಸು ತೊರೆದು ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಅಸಗೋಡು ಜಯಸಿಂಹ, ಪ್ರಕಾಶ್ ರಾಥೋಡ್ ಮಾತನಾಡಿದರು.
ಸಭೆಯಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಜಯದೇವನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ತಾಲ್ಲೂಕು ಉಸ್ತುವಾರಿ ಕಲ್ಲೇಶ್ರಾಜ್ ಪಟೇಲ್, ಯುವ ಕಾಂಗ್ರೆಸ್ನ ರಕ್ಷಾ ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಬಸವಾಪುರ ರವಿಚಂದ್ರ, ಹನುಮಂತಪ್ಪ, ಪಲ್ಲಾಗಟ್ಟೆ ಶೇಖರಪ್ಪ, ತಿಪ್ಪೇಸ್ವಾಮಿಗೌಡ, ಎಲ್.ಬಿ.ಭೈರೇಶ್, ಸುರೇಶ್ ಗೌಡ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.