ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯಲು ಶ್ರಮಿಸಲು ಕರೆ

ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯಲು ಶ್ರಮಿಸಲು ಕರೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಮಾ. 8 – ಜಿಲ್ಲೆಯಲ್ಲಿ ಶೇ.19ರಷ್ಟು ಬಾಲ್ಯ ವಿವಾಹಗಳು ನಡೆಯುತ್ತಿರುವ ವರದಿಗಳಿವೆ. ಬಾಲ್ಯ ವಿವಾಹ ತಡೆಯಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ  ಇಂದು ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊನ್ನಾಳಿ ಭಾಗದಲ್ಲಿ ಹೆಚ್ಚಿನ ಬಾಲ್ಯ ವಿವಾಹದ ಪ್ರಕರಣಗಳು ಕಂಡು ಬರುತ್ತಿವೆ. ಇವುಗಳನ್ನು ತಡೆಯಲು ಸಾಧ್ಯ ಇದೆ. ಮುಂದಿನ ಮಹಿಳಾ ದಿನಾಚರಣೆಯ ಒಳಗೆ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಕಡಿಮೆ ಮಾಡಲು ಮಹಿಳೆಯರು ಪಣ ತೊಡಬೇಕಿದೆ ಎಂದರು.

ಮಹಿಳೆಯಿಂದ ಮಹಿಳೆಯ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಯುತ್ತಿರುವ ಬಗ್ಗೆಯೂ ಆತ್ಮಾವಲೋಕನ ಬೇಕಿದೆ. ಮಹಿಳಾ ದೌರ್ಜನ್ಯದ ಪ್ರಕರಣಗಳು ನ್ಯಾಯಾಲಯಗಳಲ್ಲಿ ದಾಖಲಾದಾಗ, ಸರಿಯಾದ ಸಾಕ್ಷಿ ಹೇಳಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲು ನೆರವಾಗಬೇಕು ಎಂದವರು ಹೇಳಿದರು. 

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೇವಲ 10ನೇ ತರಗತಿ ಪೂರೈಸಲು ಆಗುತ್ತಿರಲಿಲ್ಲ. ಈಗ ಹಲವಾರು ಕ್ಷೇತ್ರಗಳಲ್ಲಿ ಅವರ ಸಾಧನೆ ಗಳನ್ನು ನೋಡಬಹುದು ಎಂದು ಹೇಳಿದರು.

ಮಹಿಳೆಯರು ಕಾನೂನುಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಉದ್ಯೋಗಸ್ಥ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಅನೇಕ ಕಾಯ್ದೆ ಕಾನೂನುಗಳು ಜಾರಿಯಾಗಿದ್ದು ಮಹಿಳೆಯರು ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಇಂದು ಮಹಿಳೆಯರು ಯಾವುದೇ ಬ್ಯಾಂಕ್‍ಗಳಿಂದ ಸಾಲವನ್ನು ಪಡೆಯದೆ ಸ್ವ-ಸಹಾಯ ಸಂಘಗಳನ್ನು ರಚಿಸಿಕೊಂಡು ಆರ್ಥಿಕವಾಗಿ ಬೆಳವಣಿಗೆ ಹೊಂದು ತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ವೀರೇಶ್‍ಕುಮಾರ್ ಮಾತನಾಡಿ, ದೇಶದಲ್ಲಿ ಮಹಿಳೆ ಯರ ಸುರಕ್ಷಿತ ನಗರಗಳ ಪಟ್ಟಿಗಳಲ್ಲಿ ನಮ್ಮ ನಗರವೂ ಒಂದಾಗಿದೆ. ಸ್ಮಾರ್ಟ್ ಸಿಟಿ ವತಿಯಿಂದ ರಕ್ಷಣೆಗಾಗಿ ನಗರದೆಲ್ಲೆಡೆ ಕ್ಯಾಮೆರಾ ಅಳವಡಿಕೆ ಹಾಗೂ ದೌರ್ಜನ್ಯ ನಡೆದಾಗ ಒನ್ ಸಿಟಿ ಒನ್ ಪೋರ್ಟಲ್ ಆಪ್ ಮೂಲಕ ದೂರಿದರೆ ನೆರವು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಾತನಾಡಿ, ಹೆಣ್ಣು ಮಕ್ಕಳನ್ನು ಬಾಲ್ಯ ದಿಂದಲೇ ಒಂದು ಚೌಕಟ್ಟಿಗೆ ಒಳಪಡಿಸಬಾರದು. ಹೆಣ್ಣಾ ಗಲಿ ಗಂಡಾಗಲಿ ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ನೋಡಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸೌಮ್ಯ, ಜಿಲ್ಲಾ ಸರ್ಕಾರಿ ನೌರರರ ಸಂಘದ ಅಧ್ಯಕ್ಷರಾದ ಬಿ. ಪಾಲಾಕ್ಷಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸನಗೌಡ, ಮಹಿಳಾ ಸಿ.ಡಿ.ಪಿ ನಿರ್ಮಲಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!