12ರಂದು ಹೊನ್ನಾಳಿಗೆ ಅಮಿತ್ ಷಾ, ಬೊಮ್ಮಾಯಿ

12ರಂದು ಹೊನ್ನಾಳಿಗೆ ಅಮಿತ್ ಷಾ, ಬೊಮ್ಮಾಯಿ

12ರಂದು ಹೊನ್ನಾಳಿಗೆ ಅಮಿತ್ ಷಾ, ಬೊಮ್ಮಾಯಿ - Janathavaniಹೊನ್ನಾಳಿ, ಮಾ.3-  ಇದೇ ದಿನಾಂಕ 12 ರ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಸಚಿವರು ಹೊನ್ನಾಳಿಗೆ ಭೇಟಿ ನೀಡಲಿದ್ದು, ನ್ಯಾಮತಿ ರಸ್ತೆಯಲ್ಲಿನ ಅರಬಗಟ್ಟೆ ವಸತಿ ಶಾಲೆಯ ಸಮೀಪದಲ್ಲಿ ಸಿದ್ದಪಡಿಸಲಿರುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ  ಸುಮಾರು 53 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

ಶುಕ್ರವಾರ ಅರಬಗಟ್ಟೆ ವಸತಿ ಶಾಲೆ ಸಮೀಪದ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಇಂದು ಭೇಟಿ ನೀಡಿ ಕಾರ್ಯಕ್ರಮ  ನಡೆಯುವ ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.  

ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಗದಗ, ಧಾರವಾಡ, ಕೊಪ್ಪಳ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಹಾಸನ ಸೇರಿದಂತೆ 12 ಜಿಲ್ಲೆಗಳಿಂದ 53 ಸಾವಿರ ಫಲಾನುಭವಿ ಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಹೇಳಿದ ರೇಣುಕಾಚಾರ್ಯ,  ತಾಂಡ ಗಳು, ಹಟ್ಟಿಗಳು, ಹೊಸಕ್ಯಾಂಪ್‌ ನಲ್ಲಿ ವಾಸಿಸುತ್ತಿರುವ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಅವರಿಗೆ ಹಕ್ಕುಪತ್ರಗಳನ್ನು ನೀಡುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರು ಗುಲ್ಬರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಿದರು. ಮೋದಿಯವರನ್ನು ಕರೆಸಿ ಹೊನ್ನಾಳಿಯಲ್ಲಿಯೇ ಆಯೋಜನೆ ಮಾಡಬೇಕೆಂಬ ನನ್ನ ಆಸೆ ಈಡೇರಲಿಲ್ಲ. ಅದನ್ನು ನನ್ನ ಸ್ನೇಹಿತ ರಾಜೂಗೌಡ ಕಿತ್ತುಕೊಂಡ.  ಹೀಗಾಗಿ ಹೊನ್ನಾಳಿಗೆ ಅಮಿತ್ ಶಾ ಅವರನ್ನು ಕರೆಸಲಾಗುತ್ತಿದ್ದು, ಇದು ಎರಡನೇ ಅತಿದೊಡ್ಡ ಕಾರ್ಯಕ್ರಮವಾಗಲಿದ್ದು, ಗಿನ್ನೀಸ್ ದಾಖಲೆಯಾಗಲಿದೆ ಎಂದರು. 

ಜಿಲ್ಲಾಧಿಕಾರಿ, ಎಸ್ಪಿಯೊಂದಿಗೆ ಚರ್ಚೆ : ಸುಮಾರು 1.50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದ್ದು, ಅದಕ್ಕಾಗಿ ಟ್ರಾಫಿಕ್ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ   ರೇಣುಕಾಚಾರ್ಯ, ಅದಕ್ಕಾಗಿ ಅರಬಗಟ್ಟೆ ವಸತಿ ಶಾಲೆಗೆ ಹೊಂದಿಕೊಂಡಂತೆ ಇರುವ ವಿಶಾಲವಾದ ಜಮೀನಿನಲ್ಲಿ ಬೃಹತ್ ಪೆಂಡಾಲ್‌ಗಳನ್ನು ಹಾಕಲಾಗುವುದು ಎಂದರು.   

ಇದೇ ಸಂದರ್ಭದಲ್ಲಿ ಎಸ್‌ಪಿ. ಸಿ.ಬಿ. ರಿಷ್ಯಂತ್ ಅವರು ಪತ್ರಿಕೆಯೊಂದಿಗೆ ಮಾತನಾಡಿ, ರಾಜ್ಯದ 12 ಜಿಲ್ಲೆಗಳಿಂದ ಬರುವ ಜನಸಂಖ್ಯೆಯನ್ನು ಆಧರಿಸಿ ಟ್ರಾಫಿಕ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹಾಗೂ ಖಾಸಗಿ ಬಸ್ ಮಾಲೀಕರ ಜೊತೆ ಸಭೆ, ಬ್ಯಾರಿಕೇಡ್ ವ್ಯವಸ್ಥೆ,  ಮ್ಯಾಪಿಂಗ್ ಪ್ಲಾನ್ ತಯಾರಿಸುವ ಸಂಬಂಧ ತಯಾರಿ ನಡೆಸಬೇಕಾಗಿದೆ ಎಂದರು. ಫಲಾನುಭವಿಗಳಿಗೆ ನೀಡುವ ಹಕ್ಕುಪತ್ರಗಳ ಕುರಿತು ಪಿಡಿಒಗಳ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ತಿರುಪತಿ ಪಾಟೀಲ್, ತಾ.ಪಂ. ಇಒ ರಾಮಭೋವಿ, ನ್ಯಾಮತಿ ತಹಶೀಲ್ದಾರ್ ಗಿರೀಶ್ ಬಾಬು, ಸಿಪಿಐ ಸಿದ್ದೇಗೌಡ, ಪಿಎಸ್‍ಐ ಶಿವಕುಮಾರ್, ನ್ಯಾಮತಿ ಪಿಎಸ್‍ಐ ರಾಘವೇಂದ್ರ ಕಾಂಡಕಿ ಹಾಗೂ ಅವಳಿ ತಾಲ್ಲೂಕಿನ ಅಧಿಕಾರಿಗಳು ಹಾಗೂ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ. ಸುರೇಶ್,  ಮುಖಂಡರಾದ ಎ.ಬಿ. ಹನುಮಂತಪ್ಪ, ನವೀನ್ ಇಂಚರ, ಮಂಜುನಾಥ್, ಅರಕೆರೆ ನಾಗರಾಜ್, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ, ಜಿ.ಪಂ. ಮಾಜಿ ಸದಸ್ಯ ಸುರೇಂದ್ರನಾಯ್ಕ, ಎಚ್.ಎ. ರಾಕೇಶ್, ದಿಶಾ ಕಮಿಟಿ ಜಿಲ್ಲಾ ನಿರ್ದೇಶಕ ನೆಲಹೊನ್ನೆ ಮಂಜುನಾಥ್ ಹಾಜರಿದ್ದರು.

error: Content is protected !!