ಯುಬಿಡಿಟಿ ಸಮಾರಂಭದಲ್ಲಿ ಅಖಿಲ ಭಾರತ ಶಿಕ್ಷಣ ಸಮಿತಿಯ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅಭಿಮತ
ದಾವಣಗೆರೆ, ಮಾ.2- ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಉತ್ತಮ ಸಾಧನೆ ಹಾಗೂ ಗುಣಾತ್ಮಕ ಬದಲಾವಣೆ ಮಾಡಬೇಕಾದರೆ ಆವಿಷ್ಕಾರ ಮತ್ತು ಸಂಶೋಧನೆ ಅತ್ಯಂತ ಅವಶ್ಯ ಎಂದು ಅಖಿಲ ಭಾರತ ಶಿಕ್ಷಣ ಸಮಿತಿಯ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅಭಿಪ್ರಾಯಪಟ್ಟರು.
ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ 1983ರ ಬ್ಯಾಚ್ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿಯೂ ಆಗಿರುವ ಪ್ರೊ.ಟಿ.ಜಿ.ಸೀತಾರಾಮ್ ಅವರು ಕಾಲೇಜಿನಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸ ಸಮಯದ ಕಾಲೇಜಿನ ಸವಿನೆನಪುಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
ಇಂದಿನ ಪ್ರಸ್ತುತ ತಾಂತ್ರಿಕ ಶಿಕ್ಷಣದಲ್ಲಿ ಅವಶ್ಯಕವಿರುವ ಎಂಟರ್ಪ್ರಿನ್ನರ್ಶಿಪ್ ಡೆವೆಲಪ್ಮೆಂಟ್ನ ಪ್ರಾಮುಖ್ಯತೆ ಬಗ್ಗೆ ವಿವರಿಸಿದ ಅವರು, ಇಂಜಿನಿಯರಿಂಗ್ ಕಾಲೇಜುಗಳು ಉದ್ಯೋಗ ಬೇಡುವ ಪದವೀಧರರನ್ನು ತಯಾರಿ ಸದೇ, ಉದ್ಯೋಗ ಸೃಷ್ಟಿಸುವ ಪದವೀಧರರನ್ನು ಹುಟ್ಟುಹಾಕಬೇಕು, ಈ ದಿಶೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ದಾವಣಗೆರೆಯಲ್ಲಿ ಮುಂಬರುವ ದಿನಗಳಲ್ಲಿ ಎಂಟರ್ಪ್ರಿನ್ನರ್ಶಿಪ್ ಪಾರ್ಕ್ ಮತ್ತು ಇನ್ಕ್ಯೊಬೇಷನ್ ಕೇಂದ್ರಗಳನ್ನು ಸ್ಥಾಪಿಸಲು ವಿತಾವಿ ಕುಲಪತಿ ಡಾ. ಎಸ್. ವಿದ್ಯಾಶಂಕರ್ ರೂಪಿಸಿರುವ ಯೋಜನೆಯನ್ನು ಶ್ಲಾಘಿಸಿದರು.
ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಗಾಗಲೇ ಹಳೆಯ ವಿದ್ಯಾರ್ಥಿ ಸಹಯೋಗದೊಂದಿಗೆ ಕಾರ್ವಿಂಗ್ ಸಲೂಷನ್ಸ್ನ ಸಂಶೋಧನೆ ಮತ್ತು ಅಭಿವೃಧ್ದಿ ಕೇಂದ್ರವನ್ನು ಸ್ಥಾಪಿಸಿದ್ದು ತನ್ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನ್ಶಿಪ್ ತರಬೇತಿ ಹಾಗೂ ಉದ್ಯೋಗ ನೀಡುತ್ತಿರುವುದನ್ನು ಪ್ರೊ ಟಿ.ಜಿ.ಸೀತಾರಾಮ್ ಪ್ರಸಂಶಿಸಿದರು
ನೂತನ ರಾಷ್ಟೀಯ ಶಿಕ್ಷಣ ನೀತಿ 2020ರ ಅನ್ವಯ ಮುಂದಿನ ದಿನಗಳಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಬಹು ಶಾಸ್ತ್ರೀಯ ವಿದ್ಯಾಲಯಗಳಾಗಿ ಪರಿವರ್ತನೆಯಾಗಬೇಕಾದ ಅನಿವಾರ್ಯತೆಯನ್ನು ವಿವರಿಸಿದರು.
ವಿದ್ಯಾರ್ಥಿಗಳು ಎ.ಐ.ಸಿ.ಟಿ.ಇ ಇಂಟರ್ಶಿಪ್ ಪೋರ್ಟಲ್ನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಐಸಿಟಿಇ ಪ್ಲೇಸ್ಮೆಂಟ್ ಪೋರ್ಟಲ್ನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೇ ಬರುವ ದಿನಗಳಲ್ಲಿ ವಿದೇಶಗಳಲ್ಲಿ ಐಐಟಿಗಳನ್ನು ಸೃಜಿಸಲಾಗುತ್ತಿದೆ ಎಂದುಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ ಬ. ದಂಡಗಿ ಮಾತನಾಡಿ, ಜಗತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನದ ದಿಗ್ಗಜರಲ್ಲಿ ಒಬ್ಬರಾದ, ದೇಶ ವಿದೇಶಗಳ ಉತ್ಕೃಷ್ಟ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿರುವ ಪ್ರೊ.ಟಿ.ಜಿ.ಸೀತಾರಾಮ್ರವರ ಕಾರ್ಯ ವ್ಯಾಪ್ತಿಯನ್ನು ಶ್ಲಾಘಿಸುತ್ತಾ ಇವರು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕರಣೀಯರಾಗಿದ್ದಾರೆಂದು ಅಭಿಮಾನದ ನುಡಿಗಳನ್ನಾಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಡಿ.ಪಿ.ನಾಗರಾಜಪ್ಪ, ಶೈಕ್ಷಣಿಕ ಮಂಡಳಿಯ ಸದಸ್ಯ ಡಾ.ಅಬ್ದುಲ್ ಬುಡನ್ ಮತ್ತು ಡಾ.ಟಿ.ಮಂಜುನಾಥ್ ಹಾಗೂ ಕಾಲೇಜಿನ ಡೀನರ್ಗಳಾದ ಡಾ.ಎನ್.ನಾಗೇಶ್, ಡಾ.ಮಲ್ಲಿಕಾರ್ಜುನ್.ಎಸ್.ಹೊಳಿ, ಡಾ.ಹೆಚ್.ಈರಮ್ಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶ್ರೀಮತಿ.ರೇಖಾ ಜಿ. ಪದಕಿ ಪ್ರಾರ್ಥಿಸಿದರು, ಡಾ. ಎನ್ ನಾಗೇಶ್ ಸನ್ಮಾನಿತರನ್ನು ಪರಿಚಯಿಸಿದರು, ಡಾ.ಶೇಖರಪ್ಪ ಮಲ್ಲೂರು ಕಾರ್ಯಕ್ರಮ ನಿರೂಪಣೆ ಮಾಡಿದರು ಮಲ್ಲಿಕಾರ್ಜುನ್ ಎಸ್.ಹೊಳಿ ವಂದಿಸಿದರು.