ಬೀದಿ ಬದಿ ವ್ಯಾಪಾರಸ್ಥರ ಪ್ರತಿಭಟನೆ

ಬೀದಿ ಬದಿ ವ್ಯಾಪಾರಸ್ಥರ ಪ್ರತಿಭಟನೆ

ದಾವಣಗೆರೆ, ಮಾ. 2- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಕೆ.ಆರ್.ಮಾರ್ಕೆಟ್, ಬೆಣ್ಣೆ ಮಾರ್ಕೆಟ್ ಹಾಗೂ ವಿವಿಧ ಭಾಗಗಳ ಬೀದಿ ಬದಿ ವ್ಯಾಪಾರಸ್ಥರು (ದಾವಣಗೆರೆ ಬೀದಿ ಬದಿ ಚಿಲ್ಲರೆ ವ್ಯಾಪಾರಸ್ಥರ ಸಂಘ) ಚಾಮರಾಜಪೇಟೆ ವೃತ್ತದಿಂದ ಪ್ರತಿಭಟನೆ ನಡೆಸಿ, ಮಹಾನಗರ ಪಾಲಿಕೆಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಎಸ್‌ಯುಸಿಐ (ಸಿ) ಸದಸ್ಯರಾದ ಭಾರತಿ ಮಾತನಾಡಿ, ದಾವಣಗೆರೆ ನಗರದ ಬಹುಭಾಗ ಜನರು ಪ್ರಸ್ತುತ ದಿನಗಳಲ್ಲಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದು, ಕೋವಿಡ್ ನಂತರದ ದಿನಗಳಲ್ಲಿ ವ್ಯಾಪಾರಸ್ಥರ ಜೀವನ ಅಧೋಗತ್ತಿಯತ್ತ ಸಾಗಿದೆ ಎಂದರು.

ಕೆ.ಆರ್. ಮಾರ್ಕೆಟ್, ಬೆಣ್ಣೆ ಮಾರ್ಕೆಟ್, ವಿವಿಧ ಭಾಗಗಳಲ್ಲಿ ಬೀದಿ ಬದಿಯಲ್ಲಿ ಅನೇಕರು ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಇವರೆಲ್ಲ ಪ್ರತಿನಿತ್ಯ ಇಂತಿಷ್ಟು ಜಕಾತಿ (ನೆಲ ಬಾಡಿಗೆ) ನೀಡುತ್ತಿದ್ದಾರೆ. ಆದರೆ ಜಕಾತಿ ಪಡೆದಿದ್ದರೂ ಟೆಂಡರ್‌ನವರು ಸುಮಾರು ವರ್ಷಗಳಿಂದ ಯಾವುದೇ ರಸೀದಿ ನೀಡಿರುವುದಿಲ್ಲ. ಇದಕ್ಕೆ  ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಜಕಾತಿ ಪಡೆಯುವವರು ತಪ್ಪದೇ ರಸೀದಿ ನೀಡಬೇಕೆಂದು ಒತ್ತಾಯಿಸಿದರು.

ರಸೀದಿಯಲ್ಲಿ ಕ್ರಮ ಸಂಖ್ಯೆ, ದಿನಾಂಕ, ಮೊತ್ತ ಹಾಗೂ ಮಹಾನಗರ ಪಾಲಿಕೆ ಮೊಹರು ಮುದ್ರಿತವಾಗಿರಬೇಕು. ಜಕಾತಿ ಪಡೆಯುವವರು ಗುರುತಿನ ಚೀಟಿ ಹಾಗೂ ಸಮವಸ್ತ್ರವನ್ನು ಧರಿಸಿರಬೇಕು. ಬೀದಿ ಬದಿ ವ್ಯಾಪಾರಸ್ಥರ ಜೊತೆ ಸಹನೆಯಿಂದ ವರ್ತಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ನಿಗದಿಪಡಿಸಿದ ಜಕಾತಿಯನ್ನಷ್ಟೇ ಪಡೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಬವಿಸಿದರೆ ಪಾಲಿಕೆ ಆಯುಕ್ತರೇ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಜಕಾತಿ ಟೆಂಡರ್ ಕರೆಯುವಾಗ ತ್ರಿ-ಪಕ್ಷೀಯ ಸಭೆಯ ಮೂಲಕವೇ ಟೆಂಡರ್ ಅನ್ನು ನಿರ್ಧರಿಸಬೇಕು ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿ, 2014 ರ ಅಧಿನಿಯಮ 2 ರ ಪ್ರಕಾರ ಸುಪ್ರೀಂಕೋರ್ಟ್ ಆದೇಶದಲ್ಲಿರುವಂತೆ ಬಹಳ ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವದಾಗಲಿ, ಕಿರುಕುಳ ನೀಡುವುದಾಗಲಿ ಮಾಡುವಂತಿಲ್ಲ. ಯಾರಾದರೂ ಉಲ್ಲಂಘಿಸಿದರೆ ತಪ್ಪದೇ ಪಾಲಿಕೆಯು ವ್ಯಾಪಾರಸ್ಥರ ಪರವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬೀದಿ ವ್ಯಾಪಾರಸ್ಥರಾದ ಇಸ್ಮಾಯಿಲ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಜೀವನ ಸುಧಾರಣೆಯ ಆರ್ಥಿಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಕಸದ ವಿಲೇವಾರಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯು ದಾವಣಗೆರೆಯ ವಿವಿಧ ಭಾಗಗಳಲ್ಲಿ ಕಸವಿಲೇವಾರಿಯನ್ನು ಉತ್ತಮವಾಗಿ ಮಾಡಲಾಗುತ್ತಿ. ಆದರೆ ಚಿಲ್ಲರೆ ವ್ಯಾಪಾರ ನಡೆಯುವ ಸ್ಥಳಗಳಲ್ಲಿ ಸರಿಯಾದ ಕಸ ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರು.

ಪ್ರತಿ ತಿಂಗಳು 100ರಿಂದ 150 ರೂ.ಗಳನ್ನು ವ್ಯಾಪಾರಸ್ಥರಿಂದ ವಸೂಲಿ ಮಾಡುತ್ತಾರೆ. ಪಾಲಿಕೆ ಉಚಿತವಾಗಿ ಕಸ ವಿಲೇವಾರಿ ಮಾಡುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗ ಳಾದ ತಿಪ್ಪೇಸ್ವಾಮಿ, ಅನಿಲ್ ಕುಮಾರ್ ಬಳ್ಳಾರಿ, ಪರಶುರಾಮ್ ಸೇರಿದಂತೆ 100 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.

error: Content is protected !!