ದಾವಣಗೆರೆ, ಫೆ.28 – ಕೃಷಿ ನಿಸರ್ಗದ ಮೇಲೆ ಅವಲಂಬಿತವಾಗಿದೆ. ಆದರೆ, ಆಧುನೀಕರಣದ ಭರದಲ್ಲಿ ಅರಣ್ಯ ನಾಶ ಮಾಡಲಾಗುತ್ತಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಎ.ಚನ್ನಪ್ಪ ಹೇಳಿದರು.
ಮಂಗಳವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಮತ್ತು ಕೃಷಿ ಅರಣ್ಯ ರೈತರ ಹಾಗೂ ತಂತ್ರಜ್ಞಾನ ಸಂಸ್ಥೆ(ಐಎಎಫ್‌ಟಿ), ವನವಿಕಾಸ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಡಿಸಲಾಗಿದ್ದ ಕೃಷಿ ಅರಣ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಅರಣ್ಯ ಉತ್ತೇಜಿಸುವುದರಿಂದ ಶುದ್ಧ ಗಾಳಿ, ನೀರು ಪಡೆಯಬಹುದು. ಮರಗಳನ್ನು ಕಡಿಯುವ ನೀತಿ-ನಿಯಮಗಳಿಗೆ ಬದಲಾವಣೆ ತಂದು ಕೃಷಿ ಅರಣ್ಯ ನೀತಿಗೆ ಪ್ರೋತ್ಸಾಹ ನೀಡ ಲಾಗುತ್ತಿದೆ. ಬುಡಕಟ್ಟು ಜನರು ಸಂಸ್ಕೃತಿ ಹೆಸರಲ್ಲಿ ಅರಣ್ಯ ಕಾಪಾಡುತ್ತಿದ್ದಾರೆ ಎಂದು ತಿಳಿಸಿದರು.
ವಾಣಿಜ್ಯ ಬೆಳೆಗಳನ್ನು ಬೆಳೆದು ಭೂಮಿಯ ವಾತಾವರಣ ಹದಗೆಡಿಸಲಾಗುತ್ತಿದೆ. ಹೆಚ್ಚು ಇಳುವರಿ ಗಳಿಸಲು ಕೃಷಿಗೆ ಬಳಸುವ ರಾಸಾಯನಿಕಗಳಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ನೈಸರ್ಗಿಕ ಕೃಷಿಯ ಕಡೆಗೆ ರೈತರು ಗಮನ ನೀಡಬೇಕು. ಗಿಡ-ಮರ ಕಡಿಮೆಯಾದಂತೆ ಮಳೆ ಪ್ರಮಾಣವು ಕಡಿಮೆಯಾಗಿ, ಕೃಷಿಯ ಮೇಲೆ ದುಷ್ಪರಿಣಾಮ ಬೀಳುತ್ತದೆ ಎಂದರು.
ಭಾರತವು 1980 ರಲ್ಲಿ ಆರಂಭಿಸಿದ ‘ಹಸಿರು ಕ್ರಾಂತಿ¬ ಯಿಂದಾಗಿ ದೇಶದಲ್ಲಿ ಆಹಾರ ಕೊರತೆ ಯಿಲ್ಲ. ಜನ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉತ್ಪಾದಿಸಲಾಗುತ್ತಿದ್ದು, ಅವಶ್ಯಕತೆಗೆ ತಕ್ಕಷ್ಟು ಬಳಸಿಕೊಂಡು ಹೆಚ್ಚಿನ ಆಹಾರವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮಾತನಾಡಿ, ಜಿಲ್ಲೆಯಲ್ಲಿ 4 ರಿಂದ 5 ಲಕ್ಷ ಸಸಿಗಳನ್ನು ನರೇಗಾ ಒಳಗೊಂಡಂತೆ ವಿವಿಧ ಯೋಜನೆಗಳಡಿ ವಿತರಿಸಲಾಗಿದ್ದು, 1200 ಹೇಕ್ಟೆರ್ ಪ್ರದೇಶವನ್ನ ಅರಣ್ಯ ಕೃಷಿ ಭೂಮಿಯಾಗಿ ಪರಿವರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್.ಜಗನ್ನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಅರಣ್ಯ ನೀತಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಉಚಿತವಾಗಿ ಸಸಿ ಒದಗಿಸಲಾಗುತ್ತಿದೆ. ಸಮಗ್ರ ಕೃಷಿ ಅರಣ್ಯ ನೀತಿ ಜಾರಿಗೆ ಶ್ರಮಿಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಎಂ.ಅಣ್ಣಯ್ಯ, ಶಿವಾನಂದಮೂರ್ತಿ, ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಮೂರ್ತಿ, ಐಡಬ್ಲ್ಯೂಎಸ್‌ಟಿ ಸಿಲ್ವಿಕಲ್ಚರಿಸ್ಟ್ ಡಾ.ದಿವಾಕರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಸ್.ರಾಘವೇಂದ್ರರಾವ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮೋಹನ್‌ಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮರ್ ಬಾದ್‌ಷಾ ಎನ್ ಸೇರಿದಂತೆ ರೈತರು, ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.