ಇಂದಿನ ವಿಜ್ಞಾನವೇ ನಾಳಿನ ತಂತ್ರಜ್ಞಾನ : ಡಾ. ಮಂಜಪ್ಪ

ಇಂದಿನ ವಿಜ್ಞಾನವೇ ನಾಳಿನ ತಂತ್ರಜ್ಞಾನ : ಡಾ. ಮಂಜಪ್ಪ

ದಾವಣಗೆರೆ, ಫೆ. 28-  1979 ರಲ್ಲಿ  ಆರಂಭಗೊಂಡ ಈ ಸಂಸ್ಥೆ ಇಂದು  ಬಹಳ ಎತ್ತರಕ್ಕೆ ಬೆಳೆದು ಜ್ಞಾನ, ವಿಜ್ಞಾನ, ತಂತ್ರಜ್ಞಾನ ಬಾಹುಳ್ಯವನ್ನ ಹೆಚ್ಚಿಸುತ್ತಾ ಬಂದಿದೆ. ಇಂದಿನ ವಿಜ್ಞಾನವೇ ನಾಳಿನ ತಂತ್ರಜ್ಞಾನ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ ಎಂದು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ನಿರ್ದೇಶಕ (ರಿಸರ್ಚ್ ಅಂಡ್ ಕನ್ಸಲ್ಟೆನ್ಸಿ) ಡಾ.ಎಸ್. ಮಂಜಪ್ಪ ಹೇಳಿದರು.

ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವತಿ ಯಿಂದ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇವೆರಡೂ ಜೊತೆ ಜೊತೆಯಾಗಿಯೇ ಸಾಗುತ್ತವೆ. ಇವೆರಡೂ ರೈಲ್ವೆ ಟ್ರ್ಯಾಕ್ ಇದ್ದಂತೆ. ಎರಡೂ ಪ್ರತ್ಯೇಕವಾಗಲು ಸಾಧ್ಯವಿಲ್ಲ. ಜೀವನ ಶೈಲಿ ಇವೆರಡರ ಸಮಾಗಮದಿಂದ ಹೊರ  ಹೊಮ್ಮಿದ ಒಂದು ಜ್ಞಾನ. ನಮ್ಮ ಜೀವನದ ಅಗತ್ಯಗಳು, ಸೌಲಭ್ಯಗಳು, ಆಹಾರ ಭದ್ರತೆ, ಆರೋಗ್ಯ ಭದ್ರತೆ ಪೂರೈಕೆಯಾಗುವುದು ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಎಂಬುದನ್ನು ಮರೆಯುವಂತಿಲ್ಲ ಎಂದರು.

ಭಾರತದ ಸಾಪ್ಟವೇರ್ ತಂತ್ರಜ್ಞಾನದ, ಉತ್ಪಾದನಾ ವಲಯದ ತಂತ್ರಜ್ಞರು ಪ್ರಪಂಚದ ಅಗ್ರಶ್ರೇಣಿಯ ಕಂಪನಿಗಳ ಸಿಇಓಗಳಾಗಿದ್ದಾರೆ. ಕೌಶಲ್ಯದಿಂದ ಮೆಚ್ಚಗೆಗೆ ಪಾತ್ರರಾಗಿದ್ದಾರೆ. ತಂತ್ರಜ್ಞಾನ ಮಾನವನ ಜೀವನವನ್ನು ಸರಳ, ಸುಲಭಗೊಳಿಸುತ್ತದೆ.  ಸಮಾಜದ ಬೆಳವಣಿಗೆಗೆ ಕೌಶಲ್ಯ ತಂತ್ರಜ್ಞಾನ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ವೈದ್ಯಕೀಯ ವಿಜ್ಞಾನದಲ್ಲಿ ನಾವುಗಳು ತಿಳಿದಂತೆ ವಿಜ್ಞಾನಿಗಳು ಮಾಡಿದ ಆವಿಷ್ಕಾರದಿಂದ ಸಿಡುಬು, ಪೋಲಿಯೋ ಸೇರಿದಂತೆ ಅನೇಕ ಜಗತ್ತಿನ ಮಾರಕ ರೋಗಗಳು ಕಡಿಮೆಯಾಗುತ್ತಿವೆ. ಇಂದು ಈ ರೋಗಗಳು ಜಗತ್ತಿನಿಂದ ಬಹುತೇಕ ಕಣ್ಮರೆಯಾಗುತ್ತಿವೆ. 1965 ರ ಸಂದರ್ಭದಲ್ಲಿ ಭಾರತ ಆಹಾರದ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭದಲ್ಲಿ  ಮತ್ತು  ಆಹಾರದ ಕೊರತೆಯಿಂದಾಗಿ ಜನರು ಸಾಯುತ್ತಿದ್ದರು. ಗೋಡ್ಲಾ ಮತ್ತು ಭಾರತದ ಸ್ವಾಮಿನಾಥ್ ಎಂಬ ವಿಜ್ಞಾನಿಗಳು ಗೋಧಿ ಮತ್ತು ಭತ್ತವನ್ನು ಅಭಿವೃದ್ಧಿಪಡಿಸಿದರು. ಆಹಾರದಲ್ಲಿ ಸ್ವಾವಲಂಬಿಯಾಗುವ ಮೂಲಕ ಭಾರತ ವಿದೇಶಗಳಿಗೆ ರಫ್ತು ಮಾಡುವಷ್ಟು ಬೆಳೆದಿದೆ. ಇದು ವಿಜ್ಞಾನದ ಕೊಡುಗೆಯಾಗಿದೆ ಎಂದರು. 

ಬಿಐಇಟಿ ಕಾಲೇಜಿನ ಪ್ರಾಚಾರ್ಯ ಡಾ. ಹೆಚ್.ಬಿ. ಅರವಿಂದ್ ಮಾತನಾಡಿ, ಇಂದು ಬಹುಮುಖ್ಯವಾಗಿ ತಿಳಿಯಬೇಕಾದದು ಭಾರತದ ವಿಜ್ಞಾನಿಗಳ ಸಾಧನೆ. ಗೆಲಿಲಿಯೋ ವಿಜ್ಞಾನಿಗಳ ಪಿತಾಮಹಾ, ವಿಜ್ಞಾನ ಮತ್ತು ತಂತ್ರಜ್ಞಾನ ಸದಾ ಜೊತೆ ಜೊತೆಯಲ್ಲೇ ಸಾಗುತ್ತವೆ ಎಂದರು.

ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆದಂತೆಲ್ಲಾ ನಮ್ಮ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದು ವಿಷಾದಿಸಿದರು.

ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಪ್ರೊ.ಕೆ.ಎಸ್. ಬಸವರಾಜಪ್ಪ, ಪ್ರೊ. ಹೆಚ್.ಆರ್. ಮಲ್ಲಿಕಾರ್ಜುನ್, ಪ್ರೊ.ಟಿ.ಎಸ್. ಕೃಷ್ಣ ಕುಮಾರ್, ಪ್ರೊ. ಸದಾಶಿವಪ್ಪ ಉಪಸ್ಥಿತರಿದ್ದರು.

ಬಿ.ಎಸ್. ಪುಣ್ಯಶ್ರೀ ಪ್ರಾರ್ಥಿಸಿದರು. ಎನ್.ಹೆಚ್. ಸಂಜನಾ ಸ್ವಾಗತಿಸಿದರು. ಎಸ್.ಎಂ. ಸಾಕ್ಷಿ ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ತಿಳಿಸಿಕೊಟ್ಟರು. ರಘುನಂದನ ಪಿ. ರಾವ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಜಿ.ಬಿ. ಅಕ್ಷತಾ ಬಹುಮಾನ ವಿತರಣೆಯ ಕಾರ್ಯವನ್ನು ನಿರ್ವಹಿಸಿದರು. ಚೇತನರಾಜ್ ಜಕನೂರು ವಂದಿಸಿದರು. 

error: Content is protected !!