ರಷ್ಯಾ, ಜರ್ಮನಿ, ಜಪಾನ್ ಹಾಗೂ ಫ್ರಾನ್ಸ್ನಂತಹ ದೇಶಗಳಲ್ಲಿ ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ : ದಾವಣಗೆರೆ ವಿ.ವಿ. ಘಟಿಕೋತ್ಸವದಲ್ಲಿ ರಾಜ್ಯಪಾಲ ಗೆಹ್ಲೋಟ್
ದಾವಣಗೆರೆ, ಫೆ. 28 – ರಷ್ಯಾ, ಜರ್ಮನಿ, ಜಪಾನ್ ಹಾಗೂ ಫ್ರಾನ್ಸ್ ಮುಂತಾದ ಮುಂದುವರಿದ ದೇಶಗಳಲ್ಲಿ ಮಾತೃಭಾಷೆ ಯಲ್ಲಿಯೇ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ಭಾರತದಲ್ಲೂ ಮಾತೃಭಾಷೆ ಮಾಧ್ಯಮದ ಮೂಲಕ ಉನ್ನತ ಶಿಕ್ಷಣದಲ್ಲಿ ವಿಕಾಸ ಆಗಬೇಕಿದೆ ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾತೃಭಾಷೆಯಿಂದ ಕಲಿಕೆ ಸುಲಭ ಹಾಗೂ ತ್ವರಿತವಾಗುತ್ತದೆ. ಮಕ್ಕಳು ತಾವು ಆಡುವ ಹಾಗೂ ಸುತ್ತ ಮುತ್ತಲು ಕೇಳುವ ಭಾಷೆಯನ್ನೇ ಶಿಕ್ಷಣದಲ್ಲೂ ಬಳಸಿದಾಗ ಕಲಿಕೆಯಿಂದ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಿದರು.
ಮಾತೃಭಾಷೆಯಿಂದ ಉನ್ನತ ಶಿಕ್ಷಣದಲ್ಲಿ ವಿಕಾಸ ಸಾಧ್ಯವಿದೆ. ಮಾತೃಭಾಷೆ ಬಳಸುವ ಮೂಲಕ ಸಾಂಸ್ಕೃತಿಕ ವೈಭವ ಬೆಳೆಸುವ ಜೊತೆಗೆ ವೈಜ್ಞಾನಿಕ ಶಕ್ತಿಯನ್ನು ಬೆಳೆಸುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕಿದೆ ಎಂದರು.
ಹಿಂದಿನಿಂದಲೂ ಭಾರತ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದು, ವಿಶ್ವಗುರು ಎನಿಸಿಕೊಡಿತ್ತು. ಚರಿತ್ರೆ ನಿರ್ಮಾಣ, ಅಧ್ಯಾತ್ಮ ಹಾಗೂ ಸರ್ವಾಂಗೀಣ ಅಭಿವೃದ್ಧಿಗಳು ಹಿಂದಿನ ಶಿಕ್ಷಣ ಪದ್ಧತಿಯಲ್ಲಿದ್ದವು. ಆಗ ಆರ್ಥಿಕ ವ್ಯವಸ್ಥೆ ಸದೃಢವಾಗಿತ್ತು. ಭಾರತ ಬಂಗಾರದ ಗಿಳಿ ಆಗಿತ್ತು ಎಂದು ರಾಜ್ಯಪಾಲರು ಹೇಳಿದರು.
ಈಗಲೂ ಅಂತಹ ಗುಣಗಳು ಹುದುಗಿವೆ. ಈಗಲೂ ಭಾರತದಲ್ಲಿ ಸಮೃದ್ಧಿ ಇದೆ. ಅವುಗಳನ್ನು ಸರಿಯಾಗಿ ಬಳಸಿ ಬೆಳವಣಿಗೆ ಹಾಗೂ ಸಮಾನತೆ ಕಾಣಬೇಕಿದೆ ಎಂದವರು ಹೇಳಿದರು.
ಹೊಸ ವಿಚಾರ, ಚಿಂತನೆಗಳಿಗೆ ಮುಕ್ತವಾಗಿರಿ: ಸೀತಾರಾಮ್
ದಾವಣಗೆರೆ, ಫೆ. 28 – ತಂತ್ರಜ್ಞಾನದ ಕಾರಣದಿಂದ ಕೆಲ ವಲಯಗಳಲ್ಲಿ ಉದ್ಯೋಗ ನಷ್ಟವಾದರೂ, ಹೊಸ ಹೊಸ ಉದ್ಯೋಗ ಗಳು ಸೃಷ್ಟಿಯಾಗುತ್ತಿವೆ. ಈ ಉದ್ಯೋಗಗಳನ್ನು ಪಡೆಯಲು ನಿರಂತರ ಕೌಶಲ್ಯವೃದ್ಧಿ ಮುಖ್ಯ ಎಂದು ಎಐಸಿಟಿಇ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ಐ.ಸಿ.ಟಿ. ಹಾಗೂ ಚಾಟ್ಜಿಪಿಟಿ ರೀತಿಯ ಮೊಬೈಲ್ ತಂತ್ರಜ್ಞಾನಗಳು ಹಲವಾರು ಉದ್ಯೋಗಗಳನ್ನು ಮನುಷ್ಯರಿಂದ ಕಸಿಯು ತ್ತಿವೆ. ಆದರೆ, ತಂತ್ರಜ್ಞಾನ ಬೆಳವಣಿಗೆ ಹೊಸ ಉದ್ಯೋಗ ಸೃಷ್ಟಿಸುತ್ತಿದೆ ಎಂದರು.
ವಿದ್ಯಾರ್ಥಿಗಳು ಕೇವಲ ಜ್ಞಾನ ಪಡೆಯುವುದಷ್ಟೇ ಅಲ್ಲದೇ, ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆಗಳನ್ನು ಬಗೆಹರಿಸುವುದು, ಸಂವಹನ ಹಾಗೂ ನಾಯಕತ್ವದ ಕೌಶಲ್ಯ ಗಳನ್ನು ಬೆಳೆಸಿಕೊಳ್ಳಬೇಕು. ಈ ಕೌಶಲ್ಯಗಳು ನೀವು ಆಯ್ಕೆ ಮಾಡಿಕೊಳ್ಳುವ ವೃತ್ತಿಗೆ ನೆರವಾಗುತ್ತವೆ ಎಂದರು. ವಿಶ್ವವು ವೈವಿಧ್ಯತೆಯಿಂದ ಕೂಡಿದೆ. ಸಾಂಸ್ಕೃತಿಕ ವೈವಿಧ್ಯತೆಗಳಿವೆ. ಇವುಗಳನ್ನು ಸ್ವೀಕ ರಿಸಬೇಕು ಹಾಗೂ ಅವುಗಳಿಂದ ಕಲಿಯಬೇಕು. ಹೊಸ ವಿಚಾರಗಳು ಹಾಗೂ ಚಿಂತನೆಗಳಿಗೆ ಮುಕ್ತವಾಗಿರಬೇಕು. ಆಗ ವ್ಯಕ್ತಿಗತ ಬೆಳವಣಿಗೆ ಸಾಧ್ಯ ಎಂದು ಸೀತಾರಾಮ್ ತಿಳಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಉದ್ಯಮಿ ಮತ್ತು ಲೆಕ್ಕ ಪರಿಶೋಧಕ ಅಥಣಿ ಎಸ್. ವೀರಣ್ಣ ಮತ್ತು ಸಮಾಜ ಸೇವೆಗಾಗಿ ಹರಪನಹಳ್ಳಿಯ ತಗ್ಗಿನಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಅವರಿಗೆ ಹಾಗೂ ಶಿಕ್ಷಣ ಸೇವೆಗಾಗಿ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಸ್ಥಾಪಕ ಶಿವಣ್ಣ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಗೌರವ ನೀಡಲಾಯಿತು. ಶಿವಣ್ಣ ಅವರ ಪರವಾಗಿ
ಪತ್ನಿ ಜಸ್ಟಿನ್ ಡಿಸೌಜ ಅವರು ಡಾಕ್ಟರೇಟ್ ಸ್ವೀಕರಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಣ ನೀತಿಯಲ್ಲಿ ಪರಿವರ್ತನೆ ತಂದು ಕೌಶಲ್ಯ ಹಾಗೂ ನೈತಿಕ ಮೌಲ್ಯದೊಂದಿಗೆ ಹೊಸ ಶ್ರೇಷ್ಠ ಆತ್ಮನಿರ್ಭರ ಭಾರತದ ಬದ್ಧತೆ ತೋರಿಸುತ್ತಿದ್ದಾರೆ. ನವ ಭಾರತ ನಿರ್ಮಾಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ ಪಾತ್ರ ಹೊಂದಿದೆ ಎಂದು ಗೆಹ್ಲೋಟ್ ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಹೊರ ಬೀಳುವುದನ್ನು ತಡೆಯಬೇಕಿದೆ. ಇದಕ್ಕಾಗಿ ಸಿ.ಎಸ್.ಆರ್., ಗ್ರಾಮಗಳು ಹಾಗೂ ವಿದ್ಯಾರ್ಥಿಗಳ ದತ್ತು ಸೇರಿದಂತೆ ಹಲವಾರು ಕ್ರಮಗಳ ಸಾಧ್ಯತೆ ಇದೆ ಎಂದರು.
ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾನಿಲಯವು ಹತ್ತು ಗ್ರಾಮಗಳನ್ನು ದತ್ತು ಪಡೆದುಕೊಂಡು ಬೆಳವಣಿಗೆಗೆ ನೆರವಾಗುತ್ತಿದೆ. ಪ್ರಚಾರೋಪನ್ಯಾಸ ಮಾಲೆಯಡಿ 101 ಪುಸ್ತಕಗಳ ಪ್ರಕಟಣೆಗೆ ಸಿದ್ಧತೆ ನಡೆದಿದೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಜಿಮ್ಖಾನಾ ಆರಭಿಸಲಾಗಿದೆ. ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರದಿಂದ 20 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಎಐಸಿಟಿಇ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡಿದರು.
ಕುಲಸಚಿವೆ ಬಿ.ಬಿ.ಸರೋಜ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ, ಡೀನ್ರಾದ ಪ್ರೊ.ರಾಮಲಿಂಗಪ್ಪ, ಪ್ರೊ.ವೆಂಕಟರಾವ್ ಪಲಾಟಿ, ಪ್ರೊ. ಜೆ.ಕೆ.ರಾಜು ಮತ್ತು ಡಾ.ಕೆ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಭೀಮಾಶಂಕರ ಜೋಶಿ ಮತ್ತು ಡಾ.ಮಾನಸ ಕಾರ್ಯಕ್ರಮ ನಿರೂಪಿಸಿದರು.