ಬೀದಿ ಬದಿ ವ್ಯಾಪಾರಸ್ಥರಿಗೆ ಕ್ರೀಡಾ ಸ್ಪರ್ಧೆ

ಬೀದಿ ಬದಿ ವ್ಯಾಪಾರಸ್ಥರಿಗೆ ಕ್ರೀಡಾ ಸ್ಪರ್ಧೆ

ದಾವಣಗೆರೆ, ಫೆ.23-  ಜಿಲ್ಲಾಡಳಿತ, ಮಹಾ ನಗರ ಪಾಲಿಕೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಹಯೋಗದಲ್ಲಿ ಪಿ.ಎಂ. ಸ್ವ-ನಿಧಿ ಯೋಜನೆಯಡಿ ಹಮ್ಮಿಕೊಳ್ಳಲಾಗಿರುವ ‘ಸ್ವ-ನಿಧಿ ಮಹೋತ್ಸವ’ ಕಾರ್ಯಕ್ರಮದ ನಿಮಿತ್ತ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಮಕ್ಕಳಿಗೆ ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಮಹಾನಗರ ಪಾಲಿಕೆ ಮೇಯರ್ ಜಯಮ್ಮ  ಗೋಪಿನಾಯ್ಕ್ ಹಾಗೂ ಪಾಲಿಕೆ ಸದಸ್ಯ ಮತ್ತು ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಹಳದಿ ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ನಂತರ ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಅಭಿವೃದ್ಧಿಗಾಗಿ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಾಲಿಕೆ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ಕ್ರೀಡಾ ಸ್ಪರ್ಧೆ ಏರ್ಪಡಿಸಿರುವುದು ಸಂತೋಷದ ವಿಷಯ. ಬೀದಿ ಬದಿ ವ್ಯಾಪಾರಸ್ಥರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಮುಂದಿನ ದಿನಗಳಲ್ಲಿ ಪಾಲಿಕೆ ವತಿಯಿಂದ ಆರೋಗ್ಯ ಕಾರ್ಡ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಪಾಲಿಕೆಯಿಂದ ಪಕ್ಷಾತೀತವಾಗಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸತ್ಯನಾರಾಯಣ್, ಉಪಮೇಯರ್ ಗಾಯತ್ರಿಬಾಯಿ ಖಂಡೋಜಿ ರಾವ್, ಮಾಜಿ ಮೇಯರ್ ಎಸ್.ಟಿ ವೀರೇಶ್, ಬೀದಿ ಬದಿ ವ್ಯಾಪಾರ ಸಮಿತಿಯ ಸದಸ್ಯರಾದ ಇಸ್ಮಾಯಿಲ್, ದುಗ್ಗಪ್ಪ, ಮಲ್ಲಪ್ಪ, ಪಾಲಿಕೆ ಸಿಬ್ಬಂದಿಗಳಾದ ಪ್ರಸನ್ನ, ವಿರೂಪಾಕ್ಷಗೌಡ ಸೇರಿದಂತೆ ಸ್ಪರ್ಧೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಮತ್ತು ಮಕ್ಕಳು, ತೀರ್ಪುಗಾರರಾಗಿ ದೈಹಿಕ ಶಿಕ್ಷಕರು ಭಾಗವಹಿಸಿದ್ದರು. ಪಾಲಿಕೆ ಸಿಬ್ಬಂದಿ ಗದ್ದಿಗೇಶ್ ನಿರೂಪಿಸಿದರು.

ಏರ್ಪಡಿಸಲಾದ ಸ್ಪರ್ಧೆಗಳು : ಮಹಿಳಾ ಮತ್ತು ಪುರುಷ ಸ್ಪರ್ಧಾರ್ಥಿಗಳಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ, ಸಂಗೀತ ಕುರ್ಚಿ, ಫಾಸ್ಟ್ ವಾಕ್ ಸ್ಪರ್ಧೆ, (ವೇಗದ ನಡಿಗೆ).

ಮಕ್ಕಳಿಗೆ : ಪ್ರಾಥಮಿಕ ಶಾಲಾ ಮಕ್ಕಳಿಗೆ ಕಪ್ಪೆ ಜಿಗಿತ ಸ್ಪರ್ಧೆ, ಪ್ರೌಢಶಾಲೆ ಮಕ್ಕಳಿಗೆ ರಾಷ್ಟ್ರ ನಾಯಕರ ಛದ್ಮವೇಷ ಸ್ಪರ್ಧೆ, ಪಿಯುಸಿ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ 100 ಮೀ. ಓಟದ ಸ್ಪರ್ಧೆ.

error: Content is protected !!