ಹರಿಹರ, ಫೆ. 21 – ಕಳೆದ ಹಲವಾರು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಗರಾಭಿವೃದ್ಧಿಗಾಗಿ ವಿವಿಧ ಯೋಜನೆಗಳ ಹೆಸರಿನಲ್ಲಿ ಹಣ ನೀಡಿದರೂ, ನಿರೀಕ್ಷಿಸಿದ ಪ್ರಮಾಣದಲ್ಲಿ ನಗರವು ಅಭಿವೃದ್ಧಿ ಹೊಂದಿಲ್ಲವೆಂದು ನಗರಸಭೆಯ ಹಿರಿಯ ಸದಸ್ಯ ಶಂಕರ್ ಖಟಾವ್ಕರ್ ಆರೋಪಿಸಿದರು.
ನಗರಸಭೆಯ ಅಧ್ಯಕ್ಷೆ ಶಾಹಿನಾ ದಾದಾ ಪೀರ್ ಭಾನುವಳ್ಳಿ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾ ಭವನದಲ್ಲಿ ಮಂಗಳವಾರ ಕರೆದಿದ್ದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ರಸ್ತೆಗಳು, ಪಾರ್ಕ್‍ಗಳು, ಸಾರ್ವಜನಿಕ ಆಸ್ಪತ್ರೆಯ ಆವರಣ ಅಭಿವೃದ್ಧಿ ಕಂಡಿಲ್ಲ. ಹರಿಹರೇಶ್ವರ ದೇವಸ್ಥಾನ ನೋಡಲು ನಿತ್ಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ, ದೇವಸ್ಥಾನ ಯಾವ ಸ್ಥಳದಲ್ಲಿದೆ ಎಂಬುದನ್ನು ತೋರಿಸುವ ಮಾರ್ಗಸೂಚಿ ನಾಮಫಲಕಗಳು ಈ ಊರಿನಲ್ಲಿ ಹಾಗೂ ನಗರದ ಹೊರಗೆ ಇಲ್ಲ. ಅದಕ್ಕೆ ನಗರಸಭೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ವಿವಿಧ ರೀತಿಯಿಂದ ನಗರವನ್ನು ಅಭಿವೃದ್ಧಿ ಪಡಿಸುವ ಕುರಿತು ನಗರಸಭೆಯ ಉಪಾಧ್ಯಕ್ಷ ವಾಮನಮೂರ್ತಿ, ಸದಸ್ಯರಾದ ಎಂ.ಜಂಬಣ್ಣ, ಹನುಮಂತಪ್ಪ ಎ.ಕೆ., ವಸಂತ ಎಸ್.ಎಂ., ನಾಗರತ್ನಮ್ಮ ಎನ್.ಕೆ., ಕೆ.ಜಿ.ಸಿದ್ದೇಶ್, ಸುಮಿತ್ರಮ್ಮ ಕೆ., ಸೈಯದ್ ಅಬ್ದುಲ್ ಅಲಿಮ್ ಚರ್ಚಿಸಿದರು.
ನಗರಸಭೆಯ ಪ್ರವೇಶ ದ್ವಾರದ ಅಕ್ಕಪಕ್ಕ ದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದು ಬೇಡ. ಈ ಹಿಂದೆ ಇಲ್ಲಿದ್ದ ವಾಣಿಜ್ಯ ಮಳಿಗೆ ಗಳನ್ನು ನೆಲಸಮ ಗೊಳಿಸಿದ ನಂತರ ಬಾಡಿಗೆ ದಾರರು ಪುನಃ ಮಳಿಗೆಗಳನ್ನು ನಿರ್ಮಿಸಿಕೊಂ ಡುವಂತೆ ಒತ್ತಾಯಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆ ಫಲಾನುಭವಿಗಳಿಗೆ ಬೇರೆಡೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ವ್ಯವಸ್ಥೆ ಮಾಡಲು ಸಭೆ ಒಪ್ಪಿಗೆ ನೀಡಿತು.
ನಗರದ ಹಿಂದೂ ರುದ್ರಭೂಮಿ ಟ್ರಸ್ಟ್‍ನವರಿಗೆ ಸ್ಮಶಾನ ಜಾಗವನ್ನು ಹಸ್ತಾಂತರ ಮಾಡದಿರುವ ಕಾರಣ ತೊಂದರೆಯಾಗಿದ್ದು, ಮುಂದಿನ ದಿನಮಾನಗಳಲ್ಲಿ ಹಸ್ತಾಂತರಿಸಲು ಚರ್ಚಿಸಲಾಯಿತು.
2016 ರಿಂದ 2020ನೇ ಸಾಲಿನವರೆಗಿನ ಸಾಮಾನ್ಯ ನಿಧಿ ಅನುದಾನದಲ್ಲಿ ನಗರದ ಆಯ್ದ ವಿಕಲ ಚೇತನರಿಗೆ ತ್ರಿಚಕ್ರ ವಾಹನಗಳನ್ನು ಖರೀ ದಿಸಿ ವಿತರಿಸಲು ಸಭೆ ಒಪ್ಪಿಗೆ ನೀಡಿತು. ರೈಲ್ವೆ ನಿಲ್ದಾಣದ ಎದುರಿಗೆ ಇರುವ ಕೇಶವ ನಗರ, ಕೆ.ಆರ್. ನಗರ, ವಿಜಯ ನಗರ, ಟಿಪ್ಪು ನಗರ, ಬಾಂಗ್ಲಾ ಬಡಾವಣೆ, ಅಮರಾವತಿ ನಗರಗಳ ಸಾರ್ವಜನಿ ಕರಿಗೆ ಅನುಕೂಲ ಕಲ್ಪಿಸಲು ರೈಲ್ವೆ ಲೈನ್ ಅಂಡರ್ ಪಾಸ್ ಅಥವಾ ಓವರ್ ಬ್ರಿಡ್ಜ್ ನಿರ್ಮಿಸಿ ಕೊಡಬೇಕೆಂದು ರೈಲ್ವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲು ಸಭೆ ಯಲ್ಲಿ ನಿರ್ಧರಿಸಲಾಯಿತು. ಪೌರಾಯುಕ್ತ ಬಸವರಾಜ ಐಗೂರು, ಸದಸ್ಯರುಗಳಾದ ರಜನಿ ಕಾಂತ್, ಉಷಾ ಮಂಜುನಾಥ್, ವಿಜಯ ಕುಮಾರ ಬಿ.ಎಂ., ಅಶ್ವಿನಿ ಕೃಷ್ಣ, ಫಕ್ಕೀರಮ್ಮ ರೇವಣಸಿದ್ದಪ್ಪ, ಅಲ್ತಾಫ್, ಜಾವಿದ್, ಕೆ.ಜಿ. ಸಿದ್ದೇಶ್, ಕವಿತಾ ಮಾರುತಿ, ಪಾರ್ವತಮ್ಮ ಐರಣಿ ಸೇರಿದಂತೆ ಅನೇಕರು ಸಭೆಯಲ್ಲಿ ಚರ್ಚಿಸಿದರು.