ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ 22 ಕೋಟಿ
ನಗರದ ಘನತ್ಯಾಜ್ಯ ವಿಲೇವಾರಿ ಜಮೀನಿ ನಲ್ಲಿ ಸುಮಾರು ವರ್ಷಗಳಿಂದ ಸಂಗ್ರಹ ವಾಗಿರುವ ಪಾರಂಪರಿಕ ತ್ಯಾಜ್ಯವನ್ನು ಬಯೋ ರೆಮಿಡಿಯೇಷನ್ ಮೂಲಕ ವಿಲೇಪಡಿಸಿ ಅಂದಾಜು 16 ಎಕರೆ ಜಾಗ ವನ್ನು ಮರು ಬಳಕೆಗೆ ಯೋಗ್ಯವಾಗಿಸುವ ಉದ್ದೇಶಕ್ಕಾಗಿ ಬಜೆಟ್ ನಲ್ಲಿ 22 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಪೌರ ಕಾರ್ಮಿಕರ ಹಿತಕಾಯಲು ಆದ್ಯತೆ
ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಹಾಜರಾತಿ ಸ್ಥಳದಲ್ಲಿ ಸುಸಜ್ಜಿತ ವಿಶ್ರಾಂತಿ ಗೃಹ ನಿರ್ಮಿಸಲು 50 ಲಕ್ಷ ರೂ. ಕಾಯ್ದಿರಿಸಲಾಗಿದೆ. ಪೌರ ಕಾರ್ಮಿಕರು ಕರ್ತವ್ಯಕ್ಕೆ ತೆರಳಲು ಅನುಕೂಲ ವಾಗಲು ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಯೋಗ ದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆಗಾಗಿ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಮಷಿನ್ಗಳ ಖರೀದಿಗೆ 3.25 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.
ದಾವಣಗೆರೆ, ಫೆ.21- ಮಹಾನಗರ ಪಾಲಿಕೆಯಿಂದ 2023-24ನೇ ಆರ್ಥಿಕ ವರ್ಷಕ್ಕೆ 17.91 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಯಿತು.
ಮಂಗಳವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಜಯಮ್ಮ ಆರ್. ಗೋಪಿನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಬಜೆಟ್ ಮಂಡಿಸಿದರು.
ಪಾಲಿಕೆಯ ಸ್ವಂತ ಆದಾಯ ಮೂಲಗಳಿಂದ 164.01 ಕೋಟಿ ರೂ. ಸಂಗ್ರಹ, ಸರ್ಕಾರದ ವಿವಿಧ ಯೋಜನೆ ಗಳಿಂದ 179.45 ಕೋಟಿ ರೂ. ಸೇರಿ ಒಟ್ಟು 490.63 ಕೋಟಿ ರೂ.ಗಳಲ್ಲಿ 539.98 ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ 17.91 ಕೋಟಿ ರೂ. ಉಳಿತಾಯ ಮಾಡುವ ನಿರೀಕ್ಷೆ ಹೊಂದಲಾಗಿದೆ.
ಆಡಳಿತ ಪಕ್ಷದ ಸದಸ್ಯರು ಇದೊಂದು ಉತ್ತಮ ಬಜೆಟ್ ಎಂದು ಬೆನ್ನು ತಟ್ಟಿಕೊಂಡರೆ, ವಿಪಕ್ಷ ನಾಯಕರು ಹಾಗೂ ಸದಸ್ಯರು ಜನರ ಕಿವಿ ಮೇಲೆ ಹೂ ಇಡುವ ಬಜೆಟ್ ಇದಾಗಿದೆ ಎಂದು ಟೀಕಿಸಿದರು.
ಆಸ್ತಿ ತೆರಿಗೆ ಹೆಚ್ಚಳದ ಗುರಿ : ಬಜೆಟ್ ನಲ್ಲಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಶೇ.100ರಷ್ಟು ಆಸ್ತಿಗಳನ್ನು ತೆರೆಗೆ ವ್ಯಾಪ್ತಿಗೆ ತಂದು 30 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಕೆ.ಆರ್. ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ ಮುಂತಾದ ಕಡೆಯ ಹೊಸ ವಾಣಿಜ್ಯ ಮಳಿಗೆಗಳೂ ಸೇರಿದಂತೆ ಈಗಾಗಲೇ ಇರುವ ವಾಣಿಜ್ಯ ಮಳಿಗೆ ಹಾಗೂ ಸಮುಚ್ಛಯಗಳಿಂದ ಒಟ್ಟಾರೆ 1.15 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ನೀರು ಸರಬರಾಜು ಶುಲ್ಕದಿಂದ 5 ಕೋಟಿ, ನೀರು ಸರಬರಾಜು ಸಂಪರ್ಕ ಶುಲ್ಕದಿಂದ 10 ಲಕ್ಷ, ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕ 1.65 ಕೋಟಿ ರೂ. ನಿರೀಕ್ಷಿಸಲಾಗಿದೆ.
ಸಂತೆ ಸುಂಕ 60 ಲಕ್ಷ, ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ 5 ಕೋಟಿ ರೂ., ಕಟ್ಟಡ ಪರವಾನಗಿ ಶುಲ್ಕ 2.10 ಕೋಟಿ ರೂ., ಉದ್ದಿಮೆ ಪರವಾನಗಿ ಶುಲ್ಕ 85 ಲಕ್ಷ, ರಸ್ತೆ ಕಡಿತ ಶುಲ್ಕ 1.50 ಕೋಟಿ ರೂ., ಆಸ್ತಿಗಳ ವರ್ಗಾವಣೆ ಮೇಲಿನ ಹೆಚ್ಚುವರಿ ಅಧಿಭಾರ ಶುಲ್ಕ 60 ಲಕ್ಷ ಹಾಗೂ ಅಭಿವೃದ್ಧಿ ಶುಲ್ಕ 45 ಲಕ್ಷ ಆದಾಯ ಸಂಗ್ರಹಣೆ ಗುರಿ ಹೊಂದಲಾಗಿದ್ದು, ಇವುಗಳು ಪಾಲಿಕೆಯ ಸ್ವಂತ ಆದಾಯ ಮೂಲಗಳಾಗಿವೆ.
3 ವರ್ಷದ್ದು ಚರ್ಚೆಯಾಗಲಿ ಎಂದ ಕಾಂಗ್ರೆಸ್, 8 ವರ್ಷದ್ದು ಎಂದ ಬಿಜೆಪಿ
ಮೇಯರ್ ಅವರು ಎರಡನೇ ಬಾರಿ ಬಜೆಟ್ ಮಂಡಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಎ.ನಾಗರಾಜ್, ಹೊಸ ಮೇಯರ್ ಬಜೆಟ್ ಮಂಡಿಸಬೇಕೆಂಬ ಒತ್ತಾಯ ನಮ್ಮದಾಗಿತ್ತು. ಆದರೆ ಏಕೆ ತರಾತುರಿಯಲ್ಲಿ ಬಜೆಟ್ ಮಂಡಿಸುತ್ತಿದ್ದೀರೋ ಗೊತ್ತಿಲ್ಲ ಎಂದರು.
ಕಳೆದ ಮೂರು ವರ್ಷಗಳಲ್ಲಿ ಏನೇನು ಕಾರ್ಯಗತಗೊಳಿಸಿದ್ದೀರಿ ಮೊದಲು ತಿಳಿಸಿ, ನಂತರ ಬಜೆಟ್ ಮಂಡಿಸಿರಿ ಎಂದು ಪಟ್ಟು ಹಿಡಿದರು.
ಬಿಜೆಪಿ ಸದಸ್ಯ ಕೆ.ಪ್ರಸನ್ನ ಕುಮಾರ್ ಮಾತ ನಾಡಿ, ಮೂರು ವರ್ಷದ ಚರ್ಚೆಯ ಜೊತೆಗೆ ಕಾಂಗ್ರೆಸ್ ಅವಧಿಯ 5 ವರ್ಷ ಸೇರಿ ಎಂಟು ವರ್ಷಗಳಲ್ಲಿ ಏನೇನು ಮಾಡಲಾಗಿದೆ ಎಂಬ ಬಗ್ಗೆಯೂ ಚರ್ಚೆಯಾಗಲಿ ಎಂದು ಮರು ಪಟ್ಟು ಹಿಡಿದರು. ಇತಿಹಾಸ ತೆಗೆದು ನೋಡಿ ಕಾಂಗ್ರೆಸ್ ಅವಧಿಯ ಐದು ವರ್ಷ ಅಭಿವೃದ್ಧಿಯ ಪರ್ವವಾಗಿತ್ತು ಎಂದು ನಾಗರಾಜ್ ಹೇಳಿದಾಗ, `ನಿಮಗೆ ಮತ ನೀಡಿ ಪಶ್ಚಾತ್ತಾಪ ಪಟ್ಟೇ ಜನತೆ ಮನೆಗೆ ಕಳುಹಿಸಿದ್ದು’ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಹಾಗೂ ಕೆ.ಎಂ. ವೀರೇಶ್ ಕಾಂಗ್ರೆಸ್ ಸದಸ್ಯರಿಗೆ ಕುಟುಕಿದರು.
ಗಡಿಗುಡಾಳ್ ಮಂಜುನಾಥ್ ಅವರ ಮನೆ ಮುಂದಿನ ರಸ್ತೆ ಟಾರ್ ರಸ್ತೆಯಾಗಿದ್ದೇ ಶಾಸಕ ಎಸ್.ಎ. ರವೀಂದ್ರನಾಥ್ ಅವರಿಂದ ಎಂದಾಗ, ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಹಾಗೂ ಎ.ನಾಗರಾಜ್, ಟಾರ್ ರಸ್ತೆ ಮಾಡಿಸಿದ್ದು ಎಸ್.ಎಸ್. ಮಲ್ಲಿಕಾರ್ಜುನ್ ಅವರು. ರವೀಂದ್ರನಾಥ್ ಒಂದು ಪುಟ್ಟಿ ಮಣ್ಣನ್ನೂ ಹಾಕಿಲ್ಲ ಎಂದು ಖಾರವಾಗಿ ತಿರುಗೇಟು ನೀಡಿದರು.
11 ಗಂಟೆಗೆ ಬಜೆಟ್ ಸಭೆ ನಿಗದಿಯಾಗಿತ್ತು. ಪಾಲಿಕೆ ಆಯುಕ್ತರು, ಅಧಿಕಾರಿಗಳು ನಿಗದಿತ ಸಮಯಕ್ಕೆ ಆಗಮಿಸಿದ್ದರಾದರೂ, ಮೇಯರ್ ಹಾಗೂ ಸದಸ್ಯರ ಆಗಮನ ತಡವಾಯಿತು. 11.35ಕ್ಕೆ ಸಭೆ ಆರಂಭವಾದರೂ, ಆರಂಭದಲ್ಲಿಯೇ ಅರ್ಧ ಗಂಟೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಗಳು ನಡೆದವು. 12ರ ನಂತರ ಬಜೆಟ್ ಕೈಪಿಡಿಯನ್ನು ಮೇಯರ್ ಬಿಡುಗಡೆ ಮಾಡಿದರು.
4 ತಾಸಲ್ಲೇ ಬಿಲ್ಡಿಂಗ್ ಲೈಸನ್ಸ್ ಕೊಡಿಸಿದ್ದೇನೆ ಎಂದ ಅಜಯ್ಗೆ ಕೈ ನಾಯಕರ ತಿರುಗೇಟು
ನಾನು ಮೇಯರ್ ಆದ ಅವಧಿಯಲ್ಲಿ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಆಂದೋಲನ ನಡೆಸಿ ಕೇವಲ ನಾಲ್ಕು ತಾಸು ಅವಧಿಯಲ್ಲಿ ಬಿಲ್ಡಿಂಗ್ ಲೈಸನ್ಸ್ ನೀಡಲಾಗಿತ್ತು. 24 ತಾಸಿನಲ್ಲಿ 7 ಕಟ್ಟಡ ಪರವಾನಗಿ ನೀಡಿ ದಾಖಲೆ ನಿರ್ಮಿಸಿದ್ದೇನೆ ಎಂದು ಬಿ.ಜಿ. ಅಜಯ್ ಕುಮಾರ್ ಹೇಳಿದಾಗ, ಕಾಂಗ್ರೆಸ್ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ನೀವು ದಾಖಲೆ ನಿರ್ಮಿಸುವುದಕ್ಕಾಗಿಯೇ ಆ ಕೆಲಸ ಮಾಡಿದ್ದೀರಿ. ಆರು ತಿಂಗಳುಗಳ ಕಾಲ ಪರವಾನಗಿಗಾಗಿ ಅಲೆಯುತ್ತಿದ್ದೇವೆ. 4 ತಾಸಿನಲ್ಲಿ ಲೈಸನ್ಸ್ ಕೊಡಲು ಸಾಧ್ಯವೇ ಇಲ್ಲ ಎಂದು ಚಮನ್ ಸಾಬ್, ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜು ನಾಥ್, ಎ.ನಾಗರಾಜ್ ವಾಕ್ಸಮರ ಆರಂಭಿಸಿದರು.
ಮೊದಲೇ ದಾಖಲೆಗಳನ್ನು ತಯಾರಿಸಿಟ್ಟು ಕೊಂಡಿದ್ದರೆ 4 ತಾಸಿನ ಬದಲಾಗಿ ಅರ್ಧ ತಾಸಿಗೇ ಲೈಸನ್ಸ್ ನೀಡಬಹುದು ಎಂದ ಅಬ್ದುಲ್ ಲತೀಫ್ ಅಜಯ್ ಅವರಿಗೆ ತಿರುಗೇಟು ನೀಡಿದರು.
ಆಯುಕ್ತರಾದ ರೇಣುಕಾ ಮಾತನಾಡಿ, ಅರ್ಜಿ ಸಲ್ಲಿಸಿದ 15 ದಿನದೊಳಗಾಗಿ ದಾಖಲೆಗಳನ್ನು ಪರೀಕ್ಷಿಸಿ ಲೈಸನ್ಸ್ ನೀಡಬೇಕೆಂದು ಸರ್ಕಾರದ ನಿರ್ದೇಶನವಿದೆ. ಆದರೆ ಸಮರ್ಪಕ ದಾಖಲೆ ನೀಡದ ಕಾರಣ ಶೇ.50ರಷ್ಟು ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ ಎಂದು ಹೇಳಿದರು. ಶೀಘ್ರವಾಗಿ ಪರವಾನಗಿ ನೀಡುವ ಉದ್ದೇಶದಿಂದ ವಿಶೇಷ ಸಭೆ ನಡೆಸಿ, ವಲಯವಾರು ಸಹಾಯಕ ಇಂಜಿನಿಯರ್ ನೇಮಿಸಲಾಗಿದೆ. ಅವರ ಮೇಲ್ವಿಚಾರಕರಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ನೇಮಿಸಲಾಗಿದೆ ಎಂದು ಹೇಳಿದರು.
ಕ್ರೀಡೆಗೆ ಹೆಚ್ಚು ಅನುದಾನ ಮೀಸಲಿಡುವಂತೆ ಚಮನ್ ಸಾಬ್ ಸಲಹೆ ನೀಡಿದಾಗ, ಶೇ.1ರಷ್ಟು ಮಾತ್ರ ಅನುದಾನ ಮೀಸಲಿಡಲು ಅವಕಾಶವಿದ್ದು, ಶೇ.2ರಷ್ಟು ಮೀಸಲಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಯುಕ್ತರಾದ ರೇಣುಕಾ ಹೇಳಿದರು. ಪಾರ್ಕ್ ಅಭಿವೃದ್ದಿಯಲ್ಲಿ 3 ಮುಸ್ಲಿಂ ಖಬರ್ ಸ್ಥಾನಗಳನ್ನೂ ಸೇರಿಸಿಕೊಳ್ಳುವಂತೆ ಚಮನ್ ಸಾಬ್ ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯರ ಕಿವಿ ಮೇಲೆ `ಹೂ’
ದಾವಣಗೆರೆ, ಫೆ. 21 -ಪಾಲಿಕೆ ಬಜೆಟ್ ಮಂಡನೆ ಆರಂಭವಾಗು ತ್ತಲೇ ಕಾಂಗ್ರೆಸ್ ಸದಸ್ಯರು ಕಿವಿ ಮೇಲೆ ದಾಸ ವಾಳದ ಹೂಗಳನ್ನು ಇಟ್ಟುಕೊಂಡರು.
ಎ. ನಾಗರಾಜ್ `ಇದು ಹೊಸತನವಿಲ್ಲದ ಬಜೆಟ್. ಕಳೆದ ವರ್ಷದ ಬಜೆಟ್ಗೂ ಇದಕ್ಕೂ ವ್ಯತ್ಯಾಸವಿಲ್ಲ. ಕಳೆದ ಬಜೆಟ್ನಲ್ಲಿನ ಘೋಷಣೆ ಗಳು ಶೇ.10ರಷ್ಟೂ ಈಡೇರಿಲ್ಲ. ಜನತೆಯ ಕಿವಿಗೆ ಹೂ ಇಡುವ ಕೆಲಸ ಮಾಡಿದ್ದೀರಿ. ಅದಕ್ಕಾಗಿಯೇ ನಾವು ಕಿವಿ ಮೇಲೆ ಹೂ ಇಟ್ಟುಕೊಂಡು ವಿರೋಧಿಸುತ್ತಿದ್ದೇವೆ’ ಎಂದು ಹೇಳಿದರು.
ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಇದು `ಖಾಲಿ ಕೊಡದ ಬಜೆಟ್’. ಇದರಿಂದ ಏನನ್ನೂ ನಿರೀಕ್ಷೆ ಮಾಡಲಾಗದು ಎಂದರು.
ಬಿಜೆಪಿಯ ಸೋಗಿ ಶಾಂತಕುಮಾರ್, ಕೆ.ಪ್ರಸನ್ನಕುಮಾರ್ ಅವರು ಹೂ ಇಟ್ಟುಕೊಂಡ ಸದಸ್ಯರನ್ನು ಟೀಕಿಸುತ್ತಾ, ಮುಂದಿನ ದಿನಗಳಲ್ಲಿ ಮತದಾರರು ನಿಮಗೆ ಹೂ ಇಡುತ್ತಾರೆಂದು ಅರಿತು, ಮೊದಲೇ ಹೂ ಇಟ್ಟುಕೊಂಡಿದ್ದೀರಿ ಎಂದು ಛೇಡಿಸಿದರೆ, ಮೊದಲೇ ಹೇಳಿದ್ದರೆ ನಾನು ಒಳ್ಳೆಯ ಕಮಲದ ಹೂಗಳನ್ನು ತರಿಸುತ್ತಿದ್ದೆ ಎಂದು ಬಿ.ಜಿ. ಅಜಯ್ ಕುಮಾರ್ ಕಾಲೆಳೆದರು.
ತೆರಿಗೆ ಹೆಚ್ಚಳದಿಂದ ಜನತೆಗೆ ಹೊರೆ ಮಾಡಬೇಡಿ. ಸಂತೆ ಶುಲ್ಕದಿಂದ ಆದಾಯ ನಿರೀಕ್ಷೆ ಬೇಡ ಎಂದು ನಾಗರಾಜ್ ಸಲಹೆ ನೀಡಿದರು. ಆದಾಯ ಕಡಿಮೆ ತೋರಿಸಿ, ಖರ್ಚು ಹೆಚ್ಚು ತೋರಿಸಿದರೆ ಹೇಗೆ ಹೊಂದಾಣಿಕೆ ಮಾಡುತ್ತೀರಿ? ಹಣಕಾಸು ಸಮಿತಿಯ ಒಪ್ಪಿಗೆ ಬೇಕಲ್ಲವೇ? ಎಂದು ಪ್ರಶ್ನಿಸುತ್ತಾ, ಅಗತ್ಯವಿರುವ ನೀರು ಹಾಗೂ ಯುಜಿಡಿ ಕೆಲಸಗಳಿಗೆ ಮಾತ್ರ ಇರುವ ಅನುದಾನ ಬಳಸಿ, ಉಳಿದವುಗಳನ್ನು ಪೆಂಡಿಂಗ್ ಇಟ್ಟು ಆದ್ಯತೆ ಮೇಲೆ ಕಾಮಗಾರಿ ಕೈಗೊಳ್ಳುವಂತೆ ಸಲಹೆ ನೀಡಿದರು.
ಹಿರಿಯ ಸದಸ್ಯ ಚಮನ್ ಸಾಬ್, ಯಾವುದೇ ಚರ್ಚೆಗಳನ್ನು ನಡೆಸದೆ, ಬೇಕಾ ಬಿಟ್ಟಿಯಾಗಿ ಮಾಡಿರುವ ಬಜೆಟ್ ಇದು ಎಂದು ಟೀಕಿಸಿದರು. ಅಧಿಕಾರಿಗಳು ಶಿಸ್ತಿನಿಂದ ಕೆಲಸ ಮಾಡಿದರೆ ಪಾಲಿಕೆ ಆದಾಯವನ್ನು 60 ಕೋಟಿ ರೂ.ಗಳಿಗೆ ಹೆಚ್ಚಿಸಬಹುದಾಗಿದೆ. ಕಂದಾಯದಲ್ಲಿ ವಂಚನೆ ನಡೆಯುತ್ತಿದೆ. ವಿವಿಧ ಕೇಬಲ್ಗಳ ಅಳವಡಿಕೆ ಮಾಡಲು ರಸ್ತೆಗಳನ್ನು ಅಗೆಯುವಲ್ಲಿ ಶುಲ್ಕ ವಿಧಿಸುವ ವಿಚಾರದಲ್ಲಿ ದೊಡ್ಡ ಮಾಫಿಯವೇ ನಡೆಯುತ್ತಿದೆ ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಆರೋಗ್ಯ, ಕಂದಾಯ ಹಾಗೂ ಆಶ್ರಯ ಯೋಜನೆ ವಿಭಾಗಗಳಲ್ಲಿ ಪಾಲಿಕೆ ಸದಸ್ಯರ ಮರ್ಯಾದೆ ತೆಗೆಯುವ ಕೆಲಸಗಳಾಗುತ್ತಿವೆ. ಆಶ್ರಯ ಯೋಜನೆ ವಿಭಾಗದಲ್ಲಂತೂ ಉಚಿತವಾಗಿ ಜಾಗ ನೀಡಿದ ಉದಾಹರಣೆ ಇತಿಹಾಸದಲ್ಲಿಯೇ ಇಲ್ಲ. ಇವುಗಳ ಬಗ್ಗೆ ಗಮನ ಹರಿಸಿ ಸರಿಪಡಿಸುವಂತೆ ಬಿ.ಜಿ. ಅಜಯ್ ಹೇಳಿದರು. 27 ಸಾವಿರ ಅರ್ಜಿಗಳು ಬಂದಿದ್ದು, ಯಾರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಪರಿಶೀಲಿಸುವಂತೆ ಅಜಯ್ ಹೇಳಿದರು.
ಆಶ್ರಯ ಯೋಜನೆಯಡಿ ಹಕ್ಕುಪತ್ರ ವಿತರಿಸುತ್ತಿರುವ ಕುರಿತು ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.
ಯಾವುದಕ್ಕೆ ಎಷ್ಟು ಖರ್ಚು : ಮಹಾನಗರ ಪಾಲಿಕೆ ನೌಕರರು, ಸಿಬ್ಬಂದಿಗಳ ವೇತನಕ್ಕೆ 44.85 ಕೋಟಿ ರೂ. ಅಂದಾಜಿಸಲಾಗಿದೆ. ಮೂಲ ಸೌಕರ್ಯ, ಆಸ್ತಿಗಳ ನಿರ್ವಹಣೆ ಹಾಗೂ ದುರಸ್ತಿಗೆ 4.45 ಕೋಟಿ ರೂ., ಹೊರಗುತ್ತಿಗೆ ವೆಚ್ಚಗಳಿಗೆ 15.47 ಕೋಟಿ ರೂ., ಉಗ್ರಾಣ ಸಾಮಗ್ರಿಗಳ ಖರೀದಿಗೆ 1.55 ಕೋಟಿ ರೂ., ಇಂಧನ ಹಾಗೂ ವಿದ್ಯುತ್ ವೆಚ್ಚಗಳಿಗಾಗಿ 43.55 ಕೋಟಿ ರೂ., ಆಡಳಿತ ನಿರ್ವಹಣೆ, ಕೌನ್ಸಲ್ ವೆಚ್ಚವಾಗಿ 3.13 ಕೋಟಿ ರೂ. ವೆಚ್ಚ ನಿಗದಿಪಡಿಸಲಾಗಿದೆ.
ವಾಚನಾಲಯ ಹಾಗೂ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ಬಜೆಟ್ ನಲ್ಲಿ ಕಾಯ್ದಿರಿಸಲಾಗಿದೆ. ಅವೈಜ್ಞಾನಿಕ ರಸ್ತೆ ಉಬ್ಬು ತೆರವಿಗೆ ಹಾಗೂ ರಸ್ತೆ ಗುಂಡಿ ಮುಚ್ಚಲು 75 ಲಕ್ಷ ರೂ., ಶಿಥಿಲಾವಸ್ಥೆಯಲ್ಲಿರುವ ಹಾಗೂ ಹಳೆಯ ಗರಡಿ ಮನೆಗಳ ನವೀಕರಣಕ್ಕೆ 50 ಲಕ್ಷ ರೂ., ಪಾಲಿಕೆ ಮುಂಭಾಗ ಸ್ಕೈವಾಕ್ ನಿರ್ಮಾಣಕ್ಕೆ 80 ಲಕ್ಷ ರೂ., ಪುತ್ಥಳಿಗಳಿಗೆ ಸುಣ್ಣ ಬಣ್ಣ ಬಳಿಯಲು 10 ಲಕ್ಷ ರೂ., ಪೌರಕಾರ್ಮಿಕರ ಸ್ವಚ್ಛತಾ ಪರಿಕರಗಳಿಗೆ 20 ಲಕ್ಷ ರೂ. ಮೀಸಲಿಡಲಾಗಿದೆ.
ಸ್ಮಶಾನಗಳ ಅಭಿವೃದ್ಧಿಗೆ 1 ಕೋಟಿ ರೂ., ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಝೋನ್ ನಿರ್ಮಾಣಕ್ಕೆ 20 ಲಕ್ಷ ರೂ., ಉದ್ಯಾನವನಗಳ ನಿರ್ವಹಣೆಗೆ 10 ಲಕ್ಷ ರೂ., ತಾರಸಿ ಉದ್ಯಾನವನಗಳಿಗಾಗಿ 5 ಲಕ್ಷ ರೂ., ಮೇಯರ್ ಕಪ್ ಕ್ರೀಡೆಗೆ 5 ಹಾಗೂ ಪೌರ ಸನ್ಮಾನ ಕಾರ್ಯಕ್ರಮಕ್ಕೆ 5 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 5 ಲಕ್ಷ, ಕ್ರೀಡಾ ಚಟುವಟಿಕೆಗೆ 15 ಲಕ್ಷ ರೂ., ವಾರ್ಡ್ ನಂ.33ರಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ 55 ಲಕ್ಷ ರೂ., ಸದಸ್ಯರ ಅಧ್ಯಯನ ಪ್ರವಾಸಕ್ಕೆ 40 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಸಭೆಯಲ್ಲಿ ಉಪ ಮೇಯರ್ ಗಾಯತ್ರಿಬಾಯಿ, ಸ್ಥಾಯಿ ಸಮಿತಿ ಸದಸ್ಯರುಗಳಾದ ಸೋಗಿ ಶಾಂತಕುಮಾರ್, ಉದಯಕುಮಾರ್, ರಾಕೇಶ್ ಜಾಧವ್, ಎಸ್.ಮಂಜುನಾಥ್, ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಆಯುಕ್ತರಾದ ರೇಣುಕಾ, ಪರಿಷತ್ ಕಾರ್ಯದರ್ಶಿ ಕೆ.ಜಯಣ್ಣ ಇತರರು ಈ ಸಂದರ್ಭದಲ್ಲಿದ್ದರು.