ಮಲೇಬೆನ್ನೂರು, ಫೆ. 21- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾ ರಥೋತ್ಸವವು ಮಂಗಳವಾರ ಬೆಳಿಗ್ಗೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಸಂಪ್ರದಾಯ ದಂತೆ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಅಜ್ಜಯ್ಯನ ಮೂರ್ತಿಯನ್ನು ಹೊತ್ತಿದ್ದ ರಥದ ಗಾಲಿಗಳಿಗೆ ಭಕ್ತರು ತೆಂಗಿನಕಾಯಿ ಒಡೆದು ಅಜ್ಜಯ್ಯನಿಗೆ ಜೈಕಾರ ಹಾಕಿ ರಥ ಎಳೆದರು. ಇನ್ನಷ್ಟು ಭಕ್ತರು ಮಂಡಕ್ಕಿ, ಮೆಣಸಿನ ಕಾಳು, ಬಾಳೆಹಣ್ಣು, ಮೆಕ್ಕೆಜೋಳ, ಊಟದ ಜೋಳ, ರಾಗಿ, ಹುರುಳಿ ಕಾಳುಗಳನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.
ಡೊಳ್ಳು, ಭಜನೆ, ಹಲಗೆ, ವೀರಗಾಸೆ, ಕೀಲುಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.
ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ನಾನಾ ಭಾಗ ಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದ್ದರು. ರಥದ ಮೇಲೆ ಎಸೆದಿದ್ದ ದ್ವಿದಳ ಧಾನ್ಯಗಳನ್ನು ರಥೋತ್ಸವದ ನಂತರ ಜನರು ಆಯ್ದುಕೊಂಡು ಮನೆಗೆ ತೆಗೆದುಕೊಂಡು ಹೋದರು. ಈ ಕಾಳುಗಳನ್ನು ಹೊಲಕ್ಕೆ ಹಾಕಿದರೆ ಬೆಳೆ ಹುಲುಸು ಬರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ದೇವಸ್ಥಾನದ ಕಲ್ಯಾಣ ಮಂಟಪ, ವಸತಿ ನಿಲಯಗಳು, ದೇವಸ್ಥಾನದ ಆವರಣ ಜನರಿಂದ ಭರ್ತಿಯಾಗಿದ್ದವು. ತುಂಗಭದ್ರಾ ನದಿ ದಡ ಹಾಗೂ ನಡುಗಡ್ಡೆಗಳಲ್ಲಿ ಜನ ಬಿಡಾರ ಹಾಕಿ ತಂಗಿದ್ದರು. ಬಹಳಷ್ಟು ಜನ ಭಕ್ತರು ತುಂಗಭದ್ರಾ ನದಿ ದಡದಲ್ಲೇ ಅಡುಗೆ ಮಾಡಿ ಗಂಗಾಪೂಜೆ ಮೂಲಕ ಎಡೆ ಮಾಡಿದರು.
ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು, ನಿಂಬೆಹಣ್ಣಿನ ರಾಶಿಯ ಮೇಲೆ ದೀಡು ನಮಸ್ಕಾರ ಹಾಕುತ್ತಿದ್ದುದು ಗಮನ ಸೆಳೆಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಅಜ್ಜಯ್ಯನ ಗದ್ದುಗೆ ದರ್ಶನ ಪಡೆದು ಫಳ್ಹಾರ ಪೂಜೆ ಮಾಡಿದರು.
ಈ ಬಾರಿ ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಮತ್ತು ಜನರಿಗೆ ಮೈಕ್‌ನಲ್ಲಿ ಸತತವಾಗಿ ಅರಿವು ಮೂಡಿಸುತ್ತಿದ್ದ ಕಾರಣ ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಂಡು ಬಂತು.
ಎಸ್ಪಿ ರಿಷ್ಯಂತ್, ಎಎಸ್ಪಿ ಬಸರಗಿ, ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರ ನಿರ್ದೇಶನದಲ್ಲಿ ಹರಿಹರ ಸಿಪಿಐ ಗೌಡಪ್ಪಗೌಡ್ರು, ಮಲೇಬೆನ್ನೂರು ಪಿಎಸ್ಐ ಪ್ರಭು ಕೆಳಗಿನಮನೆ, ಎಎಸ್ಐ ಶ್ರೀನಿವಾಸ್ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.
ಇದೇ ದಿನಾಂಕ 27ರವರೆಗೆ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಕಾರ್ಯಕ್ರಮಗಳು ಜರುಗಲಿದ್ದು, ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ವಸತಿ ವ್ಯವಸ್ಥೆ ಮಾಡಲಾಗುವುದೆಂದು ದೇವಸ್ಥಾನದ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.