ಶಿವಾಜಿ ಹಿಂದೂ ಸಮಾಜದ ಸಿಂಹ

ಶಿವಾಜಿ ಹಿಂದೂ ಸಮಾಜದ ಸಿಂಹ

ವಸತಿ ಶಾಲೆಯೊಂದಕ್ಕೆ ಶಿವಾಜಿ ಹೆಸರಿಡಿ: ಬಸವಪ್ರಭು ಶ್ರೀ ಸಲಹೆ

ಹಿಂದೂ ಧರ್ಮದ ಉಳಿವಿಗೆ ಮೂಲ ಕಾರಣ ಷಹಜಿ. ಅವರ ವಿಚಾರಧಾರೆಗಳನ್ನು ಪಠ್ಯದಲ್ಲಿ ತರಬೇಕು. ಮರಾಠ ಸಮಾಜವನ್ನು ಪ್ರವರ್ಗ 2ಎ ಯಿಂದ  2ಬಿಗೆ ಸೇರಿಸಬೇಕು. 

– ಯಶವಂತರಾವ್ ಜಾಧವ್

ದಾವಣಗೆರೆ, ಫೆ. 19- ಶಿವಾಜಿ ಮಹಾರಾಜರು ಹಿಂದೂ ಸಮಾಜದ ಸಿಂಹ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.

ಜಿಲ್ಲಾಡಳಿತ ಹಾಗೂ ಮರಾಠ ಸಮಾಜದ ವತಿಯಿಂದ ನಗರದ ಕೃಷ್ಣಾ  ಭವಾನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶೌರ್ಯ, ಸಮರ್ಥ ನಾಯಕತ್ವಕ್ಕೆ ಮತ್ತೊಂದು ಹೆಸರೇ ಶಿವಾಜಿ. ಅನೇಕರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತಾರೆ. ಅವರು ಶ್ರೀಮಂತರ ಪರವಾಗಿಯೇ ಇರುತ್ತಾರೆ. ಜನಪ್ರತಿನಿಧಿಗಳಾದವರು ನೊಂದವರು, ಬಡವರು, ಶೋಷಿತರು, ಮಹಿಳೆಯರ ಪರವಾಗಿ ಇರಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಈ ಗುಣ ಶಿವಾಜಿ ಅವರಲ್ಲಿತ್ತು ಎಂದರು.

ರಾಜಾಡಳಿತದಲ್ಲಿದ್ದ ಅಧಿಕಾರಿ ವರ್ಗ ಬಡವರನ್ನು ಶೋಷಿಸುತ್ತಿದ್ದಾಗ, ನೀವು ಇರುವುದು ಜನಸೇವೆಗೆ ಎಂದು ಹೇಳಿ, ಜನರ ಪರ ನಿಂತ, ಹಿಂದೂ ಸಮಾಜ, ಭಾರತೀಯ ಧರ್ಮ ಉಳಿಸಿದ ಕೀರ್ತಿ ಶಿವಾಜಿಗೆ ಸೇರುತ್ತದೆ ಎಂದು ಹೇಳಿದರು.

ಶಿವಾಜಿಯವರು ತಮ್ಮ ಪ್ರವಾಸದಲ್ಲಿ ಚಿತ್ರದುರ್ಗ ಮುರುಘಾ ಮಠದ ಶ್ರೀ ಮುರುಘೀ ಶಾಂತವೀರ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದರು. ಗುರುಭಕ್ತಿ ಶಿವಾಜಿಯಲ್ಲಿತ್ತು ಎಂದರು.

ಚನ್ನಗಿರಿ ತಾಲ್ಲೂಕಿನಲ್ಲಿರುವ ಶಿವಾಜಿ ಅವರ ತಂದೆ ಷಹಜಿರಾಜೇ ಭೋಂಸ್ಲೆ ಅವರ ಸಮಾಧಿ ಇರುವ ಸ್ಥಳವನ್ನು ಸರ್ಕಾರ ಅಭಿವೃದ್ಧಿ ಮಾಡಬೇಕು. ಮೊರಾರ್ಜಿ ಶಾಲೆ ಮಾದರಿಯಲ್ಲಿ ವಸತಿ ಶಾಲೆಗೆ ಶಿವಾಜಿ ಅವರ ಹೆಸರಿಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. 

ಹೊಸಪೇಟೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ವಿಠಲರಾವ್ ಟಿ.ಗಾಯಕ್ವಾಡ್ ಶಿವಾಜಿ ಮಹಾ ರಾಜರ ಕುರಿತು ಉಪನ್ಯಾಸ ನೀಡುತ್ತಾ, ಪ್ರಪಂಚದ ಹತ್ತು ಪ್ರಮುಖ ಅರಸರಲ್ಲಿ ಶಿವಾಜಿಯೂ ಒಬ್ಬರು. ಮಧ್ಯಕಾಲೀನ ಯುಗದಲ್ಲಿ ಶಿವಾಜಿ ಜನಿಸದೇ ಇದ್ದರೆ, ಇಂದು ನಾವೆಲ್ಲಾ ಬೇರೆ ಧರ್ಮದಲ್ಲಿರಬೇಕಾಗಿತ್ತು ಎಂದರು.

ಭಾರತವನ್ನು ಭಾರತವಾಗಿ ಉಳಿಸಿದ್ದ ಸಾಧನೆ ಶಿವಾಜಿಯದ್ದು.1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರನ್ನು ಎದುರಿಸಿದ್ದೇ ಈ ಮರಾಠ ಸಮಾಜ ಎಂದ ಅವರು, ಚಿಕ್ಕ ವಯಸ್ಸಿನಲ್ಲಿಯೇ ತಾಯಿಗಾಗಿ ಕಲ್ಯಾಣ ದುರ್ಗ ಕೋಟೆಯನ್ನು ಗೆದ್ದುಕೊಟ್ಟ ಧೀರ, ಚಾಣಾಕ್ಷ ದೊರೆ ಶಿವಾಜಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್, ಹೊದಿಗೆರೆಯಲ್ಲಿರುವ ಷಹಜಿರಾಜೇ ಭೋಂಸ್ಲೆ  ಅವರ ಸಮಾಧಿ ಸ್ಥಳದ ಅಭಿವೃದ್ಧಿಗೆ ಸರ್ಕಾರ 5 ಕೋಟಿ ರೂ. ಮೀಸಲಿಟ್ಟಿರುವುದು ಸಂತಸದ ವಿಚಾರ. ಆದರೆ ಅಲ್ಲಿ ಸ್ಥಳ ಖರೀದಿಗೇ ಸುಮಾರು 1.5 ಕೋಟಿ ರೂ.ಗಳಷ್ಟು ಹಣ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಟ 100 ಕೋಟಿ ರೂ.ಗಳನ್ನಾದರೂ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಶಿವಾಜಿ ಮಹರಾಜರು ಕೇವಲ ಒಂದು ಸಮಾಜದ ಉದ್ಧಾರಕ್ಕೆ ಹೋರಾಡಿದವರಲ್ಲ. ಹಿಂದೂ ಧರ್ಮದ ಉಳಿವಿಗೆ ಹೋರಾಟ ನಡೆಸಿದರು. ಅದರ ಫಲವೇ ಇಂದು ಹಿಂದೂಗಳು ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ. ಅಂತಹ ವಂಶಸ್ಥರಾದ ಮರಾಠ ಸಮಾಜ ಇಂದು ಹೀನಾಯ ಸ್ಥಿತಿಯಲ್ಲಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಪರಧರ್ಮ ಸಹಿಷ್ಣುತೆ, ಪರಸ್ತ್ರೀಯರ ಮೇಲೆ ಗೌರವ ಭಾವನೆ ಹೊಂದುವುದು ಶಿವಾಜಿಯಲ್ಲಿದ್ದ ಗುಣಗಳು. ಅವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಪಾಲಿಕೆ ನಾಮನಿರ್ದೇಶಿತ ಸದಸ್ಯ ಹೆಚ್.ಎಸ್. ಗಣೇಶರಾವ್  ಪವಾರ್, ಸಂಘದ ಖಜಾಂಚಿ ಎಂ.ಗೋಪಾಲರಾವ್ ಮಾನೆ, ಕಾರ್ಯದರ್ಶಿ ಜೆ.ಯಲ್ಲಪ್ಪ ಢಮಾಳೆ, ಶ್ರೀ ಷಹಜಿ ಮಹಾರಾಜ ಬೋಂಸ್ಲೆ ಅಭಿವೃದ್ಧಿ ಸ್ಮಾರಕ ಸಮಿತಿ ಅಧ್ಯಕ್ಷ ವೈ.ಮಲ್ಲೇಶ್, ಶ್ರೀ ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಕುಮಾರಿ ಗೌರಬಾಯಿ ಮೋಹಿತೆ ಇತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಇದೇ ಸಂದರ್ಭಲ್ಲಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

error: Content is protected !!