ವೀರಶೈವ ಸಮಾಜದ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶ ಕಲ್ಪಿಸಲು ಮನವಿ

ವೀರಶೈವ ಸಮಾಜದ ಅಭ್ಯರ್ಥಿಗಳಿಗೆ  ಹೆಚ್ಚು ಅವಕಾಶ ಕಲ್ಪಿಸಲು ಮನವಿ

ಕಾಂಗ್ರೆಸ್ ವರಿಷ್ಠರಿಗೆ ಆಕಾಂಕ್ಷಿಗಳ ಒತ್ತಾಯ

ದಾವಣಗೆರೆ, ಫೆ. 20- ಮುಂಬರುವ ಚುನಾವಣೆಯಲ್ಲಿ ವೀರಶೈವ ಸಮಾಜದ ಹೆಚ್ಚಿನ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸುವ ಬಗ್ಗೆ  ಇತ್ತೀಚಿಗೆ ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಕಾಂಗ್ರೆಸ್ ಮುಖಂಡರು ಮತ್ತು 2023 ರ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ  ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಆಕಾಂಕ್ಷಿ ಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡು ವಂತೆ ಕಾಂಗ್ರೆಸ್ ವರಿಷ್ಠರನ್ನು ಒತ್ತಾ ಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಸೇರಿದಂತೆ ಶಾಸಕರು, ಮಾಜಿ ಸಚಿವರು, 100 ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಭಾಗವಹಿಸಿದ್ದರು.

ಸ್ವಾತಂತ್ರ್ಯ ನಂತರ 1957 ರಿಂದ 2018 ರವರೆಗೆ ನಡೆದ ಚುನಾವಣೆಗಳ ಫಲಿತಾಂಶಗಳನ್ನು ಗಮನಿಸಿದರೆ ವೀರಶೈವ-ಲಿಂಗಾಯತರು, 1999 ರವರೆಗೆ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿರುವುದು ಕಂಡುಬರುತ್ತದೆ. ನಂತರದ ಬೆಳವಣಿಗೆಗಳಲ್ಲಿ ವೀರಶೈವ ಲಿಂಗಾಯತರು ಕಾಂಗ್ರೆಸ್ ಪಕ್ಷದಿಂದ ವಿಮುಖರಾಗಿ ಜನತಾ ಪಕ್ಷದ ಕಡೆಗೆ, ನಂತರ ಜನತಾ ಪಕ್ಷದಿಂದ ಬಿಜೆಪಿ ಬೆಂಬಲಿಸಿರುವುದು ಕಂಡುಬರುತ್ತದೆ. ಇದಕ್ಕೆ ಹಲವಾರು ಕಾರಣಗಳು. ಪಾರಂಪರಿಕವಾಗಿ ವೀರಶೈವ ಲಿಂಗಾಯತರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಒಲವನ್ನು ಮತ್ತು ಶಕ್ತಿಯನ್ನು ತುಂಬಿದ್ದರೂ ಸಹ ಹೆಚ್ಚಿನ ಅವಕಾಶವನ್ನು ಕಲ್ಪಿಸದಿರುವುದರಿಂದ ಕಾಂಗ್ರೆಸ್ ಪಕ್ಷವು ಅಧಿಕಾರದಿಂದ ದೂರ ಇರಬೇಕಾಗಿ ಬಂದಿರುವುದು ಮೇಲಿನ ಚುನಾವಣೆಗಳ ಅಂಕಿ-ಅಂಶಗಳಿಂದ ದೃಢಪಟ್ಟಿದೆ.

ಈ ಎಲ್ಲಾ ಅಂಶಗಳನ್ನು ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತಂದು ವೀರಶೈವ ಲಿಂಗಾಯತ ಸಮಾಜದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದರ ಜೊತೆಗೆ ಕಾಂಗ್ರೆಸ್ ಪಕ್ಷದಿಂದ ವಿಮುಖ ರಾಗಿದ್ದ ವೀರಶೈವ ಲಿಂಗಾಯತ ಸಮಾಜವನ್ನು ಪುನಃ ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯಲು ಮತ್ತು ಈ ಅವಕಾಶವನ್ನು ಬಳಸಿಕೊಳ್ಳುವಂತೆ ವರಿಷ್ಠರನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ದಕ್ಷಿಣ ಕರ್ನಾಟಕ ಭಾಗದ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 30 ರಿಂದ 40 ಸಾವಿರ ವೀರಶೈವ ಲಿಂಗಾಯತ ಮತದಾರರಿದ್ದು, ಬಹುತೇಕ ಈ ಮತಗಳೇ ನಿರ್ಣಾಯಕವಾಗಿರುತ್ತವೆ. ಈ ಹಿಂದಿನ ಚುನಾವಣೆಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಸುಮಾರು 15 ರಿಂದ 20 ಶಾಸಕರು ಈ ಜಿಲ್ಲೆಗಳಿಂದ ಆರಿಸಿ ಬರುತ್ತಿದ್ದರು. ಈ ಜಿಲ್ಲೆಗಳಿಂದ ಕಾಂಗ್ರೆಸ್ ಪಕ್ಷದಿಂದ ಅವಕಾಶ ಸಿಗದೇ ಕೇವಲ ಬೆರಳೆಣಿಕೆಯಷ್ಟು ಶಾಸಕರು ಆಯ್ಕೆ ಯಾಗುತ್ತಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು. 

error: Content is protected !!