ದಾವಣಗೆರೆ, ಫೆ. 16- ಬಿಬಿಸಿ ಮಾಧ್ಯಮ ಕಚೇರಿಗಳ ಮೇಲೆೈ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅವರು, ಮಾಧ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿರುವುದು ಖಂಡನೀಯ. ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟಿವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜವನ್ನು ಸನ್ನಡತೆಗೆ ತರಲು ಶ್ರಮಿಸುವ ಮೂಲಕ ತನ್ನದೇ ಆದ ಘನತೆ ಉಳಿಸಿಕೊಂಡು ಬಂದಿದೆ ಎಂದರು.
ಸರ್ಕಾರಗಳು ದಾರಿ ತಪ್ಪಿದಾಗ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಅಲ್ಲದೇ ಪ್ರಜಾಪ್ರಭುತ್ವದ ತಳಹದಿ ಗಟ್ಟಿಯಾಗಬೇಕಾದರೆ ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಆದರೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡದೇ, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಬಸವರಾಜ ದೊಡ್ಮನಿ ಮಾತನಾಡಿ, ದೇಶದಲ್ಲಿ ಪ್ರಸ್ತುತ ವಾತಾವರಣ ಸರಿಯಾಗಿಲ್ಲ. ಮಾಧ್ಯಮ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಪತ್ರಕರ್ತರ ವಾಕ್ ಸ್ವಾತಂತ್ರ್ಯ ಕಸಿದುಕೊಂಡಿದೆ. ಇದನ್ನು ಇಡೀ ಪತ್ರಕರ್ತ ಸಮೂಹ ಒಕ್ಕೊರಲಿನಿಂದ ಖಂಡಿಸಬೇಕು. ನಮ್ಮ ಆಕ್ರೋಶವನ್ನು ದಾಖಲಿಸುವ ಮೂಲಕ ಪತ್ರಕರ್ತರ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ. ವರದರಾಜ್, ಹಿರಿಯ ಪತ್ರಕರ್ತರಾದ ಪಿ.ಷಣ್ಮುಖಸ್ವಾಮಿ, ರಂಗನಾಥ್ ಮತ್ತಿತರರು ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ಧೀನ್ ಕಾರ್ಯಕ್ರಮ ನಿರೂಪಿಸಿದರು.
ಖಜಾಂಚಿ ಎನ್.ವಿ. ಬದರಿನಾಥ್, ಉಪಾಧ್ಯಕ್ಷರಾದ ಆರ್.ಎಸ್. ತಿಪ್ಪೇಸ್ವಾಮಿ, ಹೆಚ್.ಎನ್. ಪ್ರಕಾಶ್, ಜೆ.ಎಸ್. ವೀರೇಶ್, ನಿಂಗೋಜಿ ರಾವ್, ಎಂ.ಎಸ್. ರಾಮೇಗೌಡ, ಜೈಮುನಿ, ಚಿದಾನಂದ, ಶಾಂತಕುಮಾರ್, ಎ.ಎನ್. ನಿಂಗಪ್ಪ, ಚಂದ್ರಶೇಖರ್, ಗುರುರಾಜ್, ನಂದಕುಮಾರ್, ಕೃಷ್ಣ, ಶಿವಮೂರ್ತಿ, ಎ.ಬಿ. ರುದ್ರಮ್ಮ, ಮೊಹಮ್ಮದ್ ರಫೀಕ್, ವಿವೇಕ್ ಮತ್ತಿತರರಿದ್ದರು.