ಸೂರಗೊಂಡನಕೊಪ್ಪಕ್ಕೆ 10 ಕೋಟಿ ರೂ.

ಸೂರಗೊಂಡನಕೊಪ್ಪಕ್ಕೆ 10 ಕೋಟಿ ರೂ.

ಶ್ರೀ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಹೊನ್ನಾಳಿ, ಫೆ. 14- ಸೂರಗೊಂಡನಕೊಪ್ಪದ ಶ್ರೀ ಸಂತ ಸೇವಾಲಾಲ್ ಕ್ಷೇತ್ರದ ಅಭಿವೃದ್ದಿಗೆ 10 ಕೋಟಿ ರೂ. ಅನುದಾನವನ್ನು ಪ್ರಾಧಿಕಾರಕ್ಕೆ ಕಾಯ್ದಿರಿಸಿ ಬಿಡುಗಡೆ ಮಾಡುವುದಾಗಿ  ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ  ಘೋಷಿಸಿದರು.

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಅವರ 284ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಸಮಾಜ. ವೈಶಿಷ್ಟ್ಯ ಪೂರ್ಣವಾದ ಸಮಾಜ ಕನ್ಯಾಕುಮಾರಿಯಿಂದ ಕಾಶ್ಮೀರದವ ರೆಗೂ ಹರಡಿರುವ ಏಕೈಕ ಸಮಾಜ. ಅತ್ಯಂತ ಬುದ್ದಿವಂತ ಸಮಾಜ. ಎಲ್ಲ ರಂಗಗಳಲ್ಲೂ ಈ ಸಮಾಜದವರು ಸಾಧನೆ ಮಾಡಿದ್ದಾರೆ ಎಂದರು.

ನಿಮ್ಮ ಬುದ್ದಿವಂತಿಕೆಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ಕ್ಕೆ  ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7 ರವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಸಮಾಜದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಬಹು ದೊಡ್ಡ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.    

ಬರುವ ಮಾರ್ಚ್ ತಿಂಗಳಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತಿತವಾಗಿರುವ ತಾಂಡಾಗಳ 52 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗು ವುದು ಎಂದರು. 

ತಾಂಡಾ ಅಭಿವೃದ್ದಿಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ತಾಂಡ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ಈ ನಿಗಮದ ಮೂಲಕ ತಾಂಡಗಳ ಅಭಿವೃದ್ದಿಗೆ ರೂ.961 ಕೋಟಿ ಅನುದಾನ ನೀಡಲಾಗಿದೆ  ಎಂದರು 

ಸಮಾಜದ ಬೇಡಿಕೆಗೆ ಸರ್ಕಾರ ಎಲ್ಲ ನೆರವನ್ನು ಒದಗಿಸಲಿದೆ. ಬಂಜಾರ ಸಮುದಾಯದ ಕೆಲಸಕ್ಕೆ ವಲಸೆ ಹೋಗುವ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಲೂ ಈ ಸಮು ದಾಯದ ಜನಸಂಖ್ಯೆ  ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ವಸತಿ ಶಾಲೆಗಳನ್ನು ಆರಂಭಿಸಲಾಗು ವುದು. ವಿಶೇಷ ಅಭಿವೃದ್ದಿ ಅನುದಾನದಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿರುವ ಗ್ರಾಮಗಳ ವಸತಿ ರಹಿತ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಲೀಡಕರ್ ಮಾದರಿಯಲ್ಲಿ ಶೇಡ್ ಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. 

ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಾ ಪ್ರದೇಶದಲ್ಲಿ ಹೆರಿಟೇಜ್ ವಿಲೇಜ್ ಸ್ಥಾಪನೆ, ಬೀದರ್‍ನಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆಗೆ ಕಾಯಕಯೋಜನೆಯಡಿ ಬಂಜಾರ ಕೌಶಲ್ಯಗಳ ಪ್ರೋತ್ಸಾಹಕ್ಕೆ ತಲಾ 50 ಸಾವಿರ ನೆರವು ಸೇರಿದಂತೆ ಈ ಸಮಾಜದ ಅಭಿವೃದ್ದಿಗೆ ಸರ್ಕಾರ ಎಲ್ಲ ಅವಕಾಶಗಳನ್ನು ಒದಗಿಸಲಿದೆ  ನಿಮ್ಮ ಅಭಿವೃದ್ದಿಯಲ್ಲಿ ನಮ್ಮ ಸರ್ಕಾರ ನಿಮ್ಮ ಜೊತೆಯಲ್ಲಿ ಇರಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಬಂಜಾರ ಸಮುದಾಯದ ಅಭಿವೃದ್ದಿಗೆ ನಮ್ಮ ಸರ್ಕಾರ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಡಲಿದೆ. ಈಗಾಗಲೇ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ 50 ಸಾವಿರ ಫಲಾನುಭವಿಗಳಿಗೆ ದಾವಣಗೆರೆ ಭಾಗದಲ್ಲಿ ಹಕ್ಕುಪತ್ರ ನೀಡಲಾಗುವುದು. ಶಿವಮೊಗ್ಗ ರಾಣೇಬೆನ್ನೂರು ರೈಲು ಮಾರ್ಗದ ಭಾಯ್‍ಗಡದಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ರೈಲು ನಿಲ್ದಾಣವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಜನ್ಮಸ್ಥಳ ಅಭಿವೃದ್ಧಿಗೆ ಅವರದ್ದೇ ಕೊಡುಗೆ ಇದೆ ಈ ಕ್ಷೇತ್ರ ಎರಡನೇ ಧರ್ಮಸ್ಥಳ ಆಗಬೇಕು 83 ಕೋಟಿ ರೂ.ಗಳ ವೆಚ್ಚದಲ್ಲಿ  ತುಂಗಾಭದ್ರಾ ನದಿಯಿಂದ  ನ್ಯಾಮತಿ ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಾಗುತ್ತದೆ. ಮುಂದಿನ ವರ್ಷ ಸೊರಗೊಂಡನಕೊಪ್ಪ ಭಾಗಕ್ಕೆ ತುಂಗಾಭದ್ರಾ ನದಿ ನೀರು ಬರುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನವನ್ನು ಸಿಎಂ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ, ಕುಡುಚಿ ಶಾಸಕ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ರುದ್ರಪ್ಪ ಎಂ.ಲಮಾಣಿ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಶಾಸಕರಾದ ಚಂದ್ರನಾಯ್ಕ್, ಮಾಜಿ ಶಾಸಕ ಬಸವರಾಜ್‌ ಇತರೆ ಮುಖಂಡರು ಹಾಗೂ ಬಂಜಾರ ಸಮುದಾಯದ  ಶ್ರೀಗಳು ಉಪಸ್ಥಿತರಿದ್ದರು.

error: Content is protected !!