ದಾವಣಗೆರೆ, ಫೆ. 14- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ರಾಷ್ಟ್ರೀಯ ದಲಿತ ಸೇನೆ ರಾಷ್ಟ್ರೀಯ ಅಧ್ಯಕ್ಷ ಹಮಾರಾ ಪ್ರಸಾದ್ ಅವರನ್ನು ದೇಶದ್ರೋಹಿ ಎಂದು ಘೋಷಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಗತ್ತಿನ ಶ್ರೇಷ್ಠ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಗಳು ಅಂಬೇಡ್ಕರ್ ಅವರನ್ನು ಸರ್ವ ಶ್ರೇಷ್ಠ ಜಾಗತಿಕ ಜ್ಞಾನಿಯೆಂದು ಪರಿಗಣಿಸಿವೆ. ಆದರೆ ಜ್ಞಾನದ ಕೇಂದ್ರವಾಗಬೇಕಾಗಿದ್ದ ಜೈನ್ ವಿವಿಯು ಜಾತಿಯ ಕೇಂದ್ರವಾಗಿದೆ. ಅಂಬೇಡ್ಕರ್‌ಗೆ ಅಪಮಾನ ಮಾಡಿದ ಜೈನ್ ವಿವಿ ಮಾನ್ಯತೆ ರದ್ದು ಮಾಡುವಂತೆ ಒತ್ತಾಯಿಸಿದರು.
ಜೈನ್ ವಿವಿಯ ಮತ್ತು ಅದರ ಸಂಸ್ಥೆಯ ಅಡಿಯಲ್ಲಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು, ಶಾಲಾ-ಕಾಲೇಜುಗಳನ್ನು ಸರ್ಕಾರವೇ ವಶಪಡಿಸಿಕೊಳ್ಳುವ ಮತ್ತು ಜೈನ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕು. ಅಲ್ಲದೇ ಅಂಬೇಡ್ಕರ್ ಅವರನ್ನು ಕೊಲ್ಲುತ್ತಿದೆ ಎಂದು ಘೋಷಿಸಿರುವ ಹರಾಮಾ ಪ್ರಸಾದ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿ.ಸಿ. ಪರಶುರಾಮ್, ಬಿ.ಎನ್. ನಾಗೇಶ್, ಗಾಂಧಿನಗರದ ತಿಪ್ಪೇರುದ್ರಪ್ಪ, ಕೆ. ರುದ್ರಪ್ಪ ಮತ್ತಿತರರು ಭಾಗವಹಿಸಿದ್ದರು.