ಸಹಜ ಕೃಷಿ ಪದ್ಧತಿಯಿಂದ ಫಲವತ್ತಾದ ಹೊಲ, ಹೆಚ್ಚು ಲಾಭ : ಸುಭಾಷ್ ಶರ್ಮ
ದಾವಣಗೆರೆ, ಫೆ. 10 – ಹೊಲಕ್ಕೆ `ಊಟ’ ಹಾಕದೆ ದುಡಿಸಿಕೊಳ್ಳುತ್ತಾ ಹೋದರೆ, ಅದು ಹೆಚ್ಚು ಕಾಲ ಉಳಿಯವುದೇ? ಕೃಷಿಯ ಬೆಳವಣಿಗೆಗೆ ನೆರವಾಗುವ `ಮಿತ್ರ’ರನ್ನು ಕೊಂದು ಹಾಕಿದರೆ ಫಲ ಸಿಗುವುದೇ? ಪ್ರಕೃತಿಯೇ ಮನುಷ್ಯನ `ಮೂರ್ಖ’ತನದ ವಿರುದ್ಧ ತಿರುಗಿ ಬಿದ್ದರೆ ಉಳಿಯಲು ಸಾಧ್ಯವಾಗುವುದೇ?
ಈ ಪ್ರಶ್ನೆಗಳನ್ನು ಮುಂದಿಟ್ಟಿರುವುದು ಮಹಾರಾಷ್ಟ್ರದ ಯಾವತ್ಮಲ್ನ ಸಹಜ ಕೃಷಿ ಪದ್ಧತಿಯ ತಜ್ಞ ಸುಭಾಷ್ ಶರ್ಮ.
ಪ್ರಕೃತಿಗೆ ವಿರುದ್ಧವಾದ ಕೃಷಿ ಪದ್ಧತಿಗೆ ಯಾವತ್ಮಲ್ ಪ್ರದೇಶ ಹೆಸರು ಮಾಡಿದೆ. ಹಸಿರು ಕ್ರಾಂತಿಯ ಕೃಷಿ ಪದ್ಧತಿಗಳಿಂದ ಇಲ್ಲಿನ ರೈತರು ಸಾಲದ ಸುಳಿಗೆ ಸಿಲುಕಿದ್ದರು. ಆತ್ಮಹತ್ಯೆಯ ಪ್ರಮಾಣವೂ ಹೆಚ್ಚಾಗಿತ್ತು. ಇಷ್ಟು ಸಾಲದು ಎಂಬಂತೆ ಒಂದೆರಡು ವರ್ಷಗಳ ಹಿಂದೆ ಕೀಟನಾಶಕ ಸಿಂಪಡಣೆಯಲ್ಲಿ ತೊಡಗಿದ ರೈತರು ಸಾವನ್ನಪ್ಪಿದ್ದ ಹತ್ತಾರು ಘಟನೆಗಳು ನಡೆದಿದ್ದವು.
ಈ ಎಲ್ಲ ಸಂಕಷ್ಟಗಳ ನಡುವೆ, ಕೃಷಿಯಲ್ಲೂ ಕಸುವಿದೆ ಎಂಬುದನ್ನು ತೋರಿಸಿಕೊಟ್ಟಿದ್ದು ಸುಭಾಷ್ ಶರ್ಮ. ತಮ್ಮ 16 ಎಕರೆ ಹೊಲದಲ್ಲಿ ಸಹಜ ಕೃಷಿಯಿಂದ ಉತ್ತಮ ಲಾಭ ಪಡೆದಿದ್ದಷ್ಟೇ ಅಲ್ಲದೇ, ಕೂಲಿ ಕಾರ್ಮಿಕರ ಹಿತದ ಬಗ್ಗೆಯೂ ಗಮನ ಹರಿಸಿ ಶರ್ಮ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದರು. ಸಕಾಳ್ ಮಾಧ್ಯಮ ಸಮೂಹದ ಅಗ್ರೋವನ್ ಮಹಾರಾಷ್ಟ್ರ ಸ್ಮಾರ್ಟ್ ಶೆಟ್ಕಾರಿ ಪುರಸ್ಕಾರ್ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.
ಶರ್ಮ ಅವರು ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಸಹಜ ಕೃಷಿ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬಹುಪಾಲು ಕೀಟಗಳು ಸಸ್ಯ ರಕ್ಷಕ
ಕೀಟಗಳಲ್ಲಿ ಶೇ.80ರಷ್ಟು ಮಾಂಸಾಹಾರಿ. ಇವುಗಳಿಂದ ಬೆಳೆಗೆ ಹಾನಿಯಿಲ್ಲ, ಬದಲಿಗೆ ಇವು ಸಸ್ಯಗಳನ್ನು ತಿನ್ನುವ ಕೀಟಗಳನ್ನೇ ಭಕ್ಷಿಸುತ್ತವೆ. ಮಾಂಸಾಹಾರಿ ಕೀಟಗಳು ಹೆಚ್ಚಾದಷ್ಟೂ ಕೃಷಿಗೆ ಅನುಕೂಲ. ಆದರೆ, ರಾಸಾಯನಿಕಗಳನ್ನು ಸುರಿಯುವುದರಿಂದ ರೈತರ ಸ್ನೇಹಿ ಮಾಂಸಾಹಾರಿ ಕೀಟಗಳು ನಾಶವಾಗುತ್ತವೆ ಎಂದವರು ಹೇಳುತ್ತಾರೆ.
ಮಹಿಳೆಯರಿಗೆ ಹೆಚ್ಚು ಕೂಲಿ
ಸುಭಾಷ್ ಶರ್ಮ ಅವರು ಮಹಿಳೆಯರಿಗೆ ಹೆಚ್ಚು ಕೂಲಿ ಕೊಡುವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಮ್ಮ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರು ಬೆಳಿಗ್ಗೆ 4 ಗಂಟೆಯಿಂದಲೇ ಮನೆ ಕೆಲಸಗಳನ್ನು ಮುಗಿಸಿ ನಂತರ ಹೊಲಕ್ಕೆ ಬರುತ್ತಾರೆ. ಪುರುಷರು 6 ಗಂಟೆಯಿಲ್ಲದೇ ಏಳುವುದಿಲ್ಲ. ಅಲ್ಲದೇ, ಹೊಲದಲ್ಲಿ ಮಹಿಳೆಯರಷ್ಟು ಶ್ರದ್ಧೆಯಿಂದ ಪುರುಷರು ಕೆಲಸ ಮಾಡುವುದಿಲ್ಲ. ಹೀಗಾಗಿ ಮಹಿಳೆಯರಿಗೇ ಕೂಲಿ ಹೆಚ್ಚು ಕೊಡುತ್ತೇನೆ ಎಂಬುದು ಅವರ ನಿರ್ಧಾರ.
ಎಲ್ಲ ಜೀವ – ಜಂತುಗಳೂ ಭೂಮಿಗೆ ಭೋಜನ
ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ. ಬೆಳೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಪೋಷಿಸುವುದು. ಪಶು – ಪಕ್ಷಿಗಳು, ಜೀವ – ಜಂತು – ಜೀವಾಣುಗಳು ಕೃಷಿಗೆ ಅಗತ್ಯ. ಪಶುಗಳು ಸೆಗಣಿ – ಹಿಕ್ಕೆಯಿಂದ ಜಮೀನು ಫಲವತ್ತಾಗುತ್ತದೆ. ಪಶುಗಳ ಸತ್ತಾಗ ಅವುಗಳ ದೇಹ ಮಣ್ಣಿನಲ್ಲಿ ಬೆರೆತು ಫಲವತ್ತತೆ ಹೆಚ್ಚಿಸುತ್ತದೆ. ಎಲ್ಲ ರೀತಿಯ ಜೀವ – ಜಂತು – ಜೀವಾಣುಗಳು ಸತ್ತಾಗಲೂ ಮಣ್ಣು ಫಲವತ್ತಾಗುತ್ತದೆ. ಈ ರೀತಿಯ ಫಲವತ್ತತೆಯೇ ಭೂಮಿಗೆ ಭೋಜನ ಇದ್ದಂತೆ. ಇದು ಭೂಮಿಗೆ ಸಿಗದಂತೆ ಮಾಡಿದರೆ ಕೃಷಿ ಉದ್ಧಾರವಾಗದು ಎಂದವರು ತಿಳಿಸಿದರು.
ಶ್ರೀಲಂಕಾದ್ದು ಅವಸರದ ಸಾವಯವ ಕೃಷಿ
ಶ್ರೀಲಂಕಾದಲ್ಲಿ 2021ರಲ್ಲಿ ಹಠಾತ್ತನೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ನಿಷೇಧಿಸಿ ಸಾವಯವ ಕೃಷಿಗೆ ತೆರಳುವಂತೆ ರೈತರಿಗೆ ತಿಳಿಸಲಾಯಿತು. ಆದರೆ, ಈ ಪ್ರಯೋಗ ಯಶಸ್ವಿಯಾಗದೇ ಆಹಾರ ಬಿಕ್ಕಟ್ಟಿಗೆ ಕಾರಣವಾಯಿತು.
ಶ್ರೀಲಂಕಾದ ವೈಫಲ್ಯಕ್ಕೆ ಸಾವಯವ ಕೃಷಿ ಕಾರಣವಲ್ಲ ಎಂದಿರುವ ಸುಭಾಷ್ ಶರ್ಮ, ಅವಸರದಲ್ಲಿ ಕೃಷಿ ಪದ್ಧತಿ ಬದಲಾವಣೆ ಮಾಡಲಾಯಿತು. ಸಹಜ ಕೃಷಿಗೆ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ರೈತರಿಗೆ ತರಬೇತಿ ನೀಡಬೇಕು ಎಂದರು.
ಹೊಲಕ್ಕೆ ಪಶುಗಳು ಬೇಕೇ ಬೇಕು. ಪಶುಗಳ ಸೆಗಣಿ ಹಾಗೂ ಜೈವಿಕ ತ್ಯಾಜ್ಯಗಳೇ ಹೊಲಕ್ಕೆ ಊಟವಿದ್ದಂತೆ. ಮಾಂಸಾಹಾರಿ ಕೀಟಗಳಿಂದ ಹೊಲಕ್ಕೆ ರಕ್ಷಣೆ ಸಿಗುತ್ತದೆ. ಕೀಟನಾಶಕ ಸಿಂಪಡಣೆ ಎಂದರೆ, ಈ ರೈತ ಮಿತ್ರ ಕೀಟಗಳನ್ನು ಕೊಲ್ಲುವುದು. ಹೊಲಕ್ಕೆ ವಿಷಕಾರಿ ರಾಸಾಯನಿಕಗಳನ್ನು ಸುರಿಯುವುದು ಎಂದರೆ ಮನುಷ್ಯನ ಮೂರ್ಖತನ. ಈ ಮೂರ್ಖತನ ತೋರಿದರೆ ಪ್ರಕೃತಿ ಮುನಿಯುತ್ತದೆ ಎಂದು ಶರ್ಮ ವಿವರಿಸಿದರು.
1994ರವರೆಗೂ ರಾಸಾಯನಿಕ ಕೃಷಿಯಲ್ಲೇ ತೊಡಗಿದ್ದೆ. ಆದರೆ, ಇದರ ದುಷ್ಪರಿಣಾಮ ನೋಡಿ, ಸಹಜ ಕೃಷಿ ಪದ್ಧತಿಗೆ ಮುಂದಾದೆ. ಅಲ್ಲಿಂದ ನನ್ನ ಹೊಲವೇ ವಿಶ್ವವಿದ್ಯಾಲಯವಾಯಿತು. ಅಲ್ಲಿನ ಮಣ್ಣು, ನೀರು, ಗಾಳಿ, ಪಶು – ಪಕ್ಷಿಗಳೇ ಶಿಕ್ಷಕರಾದರು ಎಂದರು.
ಕಳೆದ 28 ವರ್ಷಗಳಲ್ಲಿ ಸಹಜ ಕೃಷಿಯಲ್ಲಿ ಯಶಸ್ಸು ಕಂಡಿದ್ದೇನೆ. ಅಷ್ಟೇ ಅಲ್ಲದೇ, ಕೇವಲ ಒಂದು ಎಕರೆಯಿಂದ ಹಿಡಿದು 66 ಎಕರೆಯವರೆಗಿನ ಜಮೀನುಗಳಲ್ಲಿ ಸಹಜ ಕೃಷಿ ಮಾಡುವ ಹಲವಾರು ಮಾದರಿಗಳನ್ನು ರೂಪಿಸಿದ್ದೇನೆ. ನಾಲ್ಕು ಲಕ್ಷದಷ್ಟು ಜನರು ನನ್ನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಸಾವಿರಾರು ಜನರು ಅಳವಡಿಸಿಕೊಂಡಿದ್ದಾರೆ ಎಂದವರು ಹೇಳಿದರು.
ಸೂರ್ಯನಿಂದ ಬರುವ ಬೆಳಕು, ಮಣ್ಣು, ಗಾಳಿ, ನೀರು, ಬೀಜ, ಪಶು – ಪಕ್ಷಿಗಳು, ಜೀವ – ಜಂತು – ಜೀವಾಣುಗಳೆಲ್ಲವೂ ಕೃಷಿಗೆ ಪೂರಕವಾಗಬಲ್ಲವು. ರಾಸಾಯನಿಕಗಳನ್ನು ಜಮೀನುಗಳಿಗೆ ಸುರಿಯದೇ, ಪ್ರಕೃತಿಯನ್ನೇ ಸ್ನೇಹಿತನನ್ನಾಗಿ ಮಾಡಿಕೊಂಡು ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದೇನೆ ಎಂದವರು ತಿಳಿಸಿದರು.
ಸಹಜ ಕೃಷಿಗೆ ಮುಂದಾಗುವವರು ಜಮೀನು ಬೀಳು ಬಿಡಬೇಕಿಲ್ಲ. ಒಂದೇ ವರ್ಷದಲ್ಲಿ ಸಹಜ ಕೃಷಿಯಿಂದ ಲಾಭ ಪಡೆಯಲು ಸಾಧ್ಯ. ಸಹಜ ಕೃಷಿ ಬಗ್ಗೆ ಜನರು ಹೆಚ್ಚು ತಿಳಿದು, ಈ ಪದ್ಧತಿ ಅಳವಡಿಸಿಕೊಂಡಷ್ಟೂ ಲಾಭದತ್ತ ಹೆಜ್ಜೆ ಹಾಕಲು ಸಾಧ್ಯ ಎಂದು ಶರ್ಮ ಹೇಳಿದರು