ಪೌರ ಕಾರ್ಮಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ

ಪೌರ ಕಾರ್ಮಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ

ಅಧಿಕಾರಿಗಳಿಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಕೋಟೆ ಎಚ್ಚರಿಕೆ

ದಾವಣಗೆರೆ, ಫೆ. 10 – ಪೌರ ಕಾರ್ಮಿಕರಿಗೆ ಅಧಿಕಾರಿಗಳು ತೊಂದರೆ ನೀಡಿದಲ್ಲಿ ಅವರ ವಿರುದ್ಧ ಕ್ರಮ, ದಂಡ ಹಾಗೂ ಜೈಲು ಶಿಕ್ಷೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಪೌರ ಕಾರ್ಮಿಕರ ವಿಷಯದಲ್ಲಿ ಆಯೋಗವೇ ಸರ್ವೋಚ್ಛ ಸಂಸ್ಥೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ತಿಳಿಸಿದರು.

ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಾಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕಾಯ್ದೆ ಕುರಿತ ಅರಿವು ಮೂಡಿಸುವ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ರೈಲ್ವೆ ವಿಭಾಗದಲ್ಲಿ ಇತ್ತೀಚೆಗೆ 150 ಪೌರ ಕಾರ್ಮಿಕರನ್ನು ವಜಾಗೊಳಿಸಲಾಗಿತ್ತು. ಈ ಪ್ರಕರಣ ಹೈಕೋರ್ಟ್‌ಗೆ ಬಂದಾಗ, ಪೌರಕಾರ್ಮಿಕರ ವಿಷಯದಲ್ಲಿ ಸಫಾಯಿ ಕರ್ಮಚಾರಿ ಆಯೋಗವು ಸರ್ವೋಚ್ಛ ನಿರ್ಧಾರಕ ಎಂದು ನ್ಯಾಯಾಲಯ ಹೇಳಿದೆ ಎಂದು ಶಿವಣ್ಣ ತಿಳಿಸಿದರು.

ಪೌರ ಕಾರ್ಮಿಕರಿಗೆ ಸಂಬಂಧಿಸಿದ 350 ಪ್ರಕರಣಗಳ ವಿಚಾರಣೆ ಈಗ ಆಯೋಗದಲ್ಲಿ ನಡೆಯುತ್ತಿದೆ. ಪೌರ ಕಾರ್ಮಿಕರಿಗೆ ಏನೇ ತೊಂದರೆಗಳಾಗಿದ್ದರೂ ಅವರು ಆಯೋಗದಿಂದ ನೆರವು ಪಡೆಯಬಹುದು ಎಂದು ತಿಳಿಸಿದರು.

ನೇರ ಪಾವತಿಯಲ್ಲಿರುವ 26 ಸಾವಿರದಷ್ಟು ಪೌರ ಕಾರ್ಮಿಕರನ್ನು ಈಗ ಎರಡು ಹಂತಗಳಲ್ಲಿ ಖಾಯಂ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ ವೇಳೆಗೆ ಪೌರ ಕಾರ್ಮಿಕರಿಗೂ ಸರ್ಕಾರಿ ನೌಕರರ ರೀತಿಯ ಸೌಲಭ್ಯಗಳು ಸಿಗಲಿವೆ ಎಂದವರು  ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ಸಂಪೂರ್ಣ ರದ್ದು ಮಾಡಿ, ಎಲ್ಲ ಪೌರ ಕಾರ್ಮಿಕರನ್ನು ನೇರ ಪಾವತಿಗೆ ತರಲಾಗುವುದು ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಪೌರ ಕಾರ್ಮಿಕರು ಸ್ವಂತ ಕಾಲ ಮೇಲೆ ನಿಲ್ಲಲು ನಿಗಮದಿಂದ ಎಂಟು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ನೇರ ಸಾಲ, ಸಣ್ಣ ಉದ್ಯಮಗಳಿಗೆ ಸಾಲ, ಗಂಗಾ ಕಲ್ಯಾಣ ಯೋಜನೆ, ಟ್ಯಾಬ್ ವಿತರಣೆ ಮತ್ತಿತರೆ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಿಗಮದ ಕ್ಯಾಲೆಂಡರ್ ಹಾಗೂ ಸೌಲಭ್ಯಗಳ ಮಾಹಿತಿಯ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ವೇದಿಕೆಯ ಮೇಲೆ ಮೇಯರ್ ಆರ್. ಜಯಮ್ಮ ಗೋಪಿನಾಯ್ಕ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕೃಷ್ಣಾ ನಾಯಕ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ. ರಮೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ. ನಾಗರಾಜ, ಜಿಲ್ಲಾ ಜಾಗೃತಿ ಸಮಿತಿಯ ಉಚ್ಚಂಗೆಪ್ಪ, ಶಂಕರ್, ಮಂಜಮ್ಮ, ಲಕ್ಷ್ಮಿ, ಪೌರ ಕಾರ್ಮಿಕರ ಮುಖಂಡರಾದ ಎಲ್.ಎಂ. ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ಎನ್. ಮಹಾಂತೇಶ್ ಸ್ವಾಗತಿಸಿದರೆ, ಗಂಗಾಧರ ನಿಟ್ಟೂರು ನಿರೂಪಿಸಿದರು.

error: Content is protected !!