ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ `ಹೆಸರಿನ ಮೇಲೆ ಕೆಸರಾಟ’

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ `ಹೆಸರಿನ ಮೇಲೆ ಕೆಸರಾಟ’

ದಾವಣಗೆರೆ, ಫೆ.9- ಆರು ತಿಂಗಳ ನಂತರ ದಾವಣಗೆರೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಬಹುಪಾಲು ಸಮಯ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ವಾಕ್ಸಮರಕ್ಕೆ ಬಲಿಯಾಯಿತು.

ನಗರದ ಸಮಸ್ಯೆಗಳ ಕುರಿತು ಚರ್ಚಿಸಲು ಸಮಯ ನೀಡಬೇಕೇ ಬೇಡವೇ? ಎಂಬ ವಿಷಯಕ್ಕೆ ಆರಂಭಿಕ ಕಾಲು ಗಂಟೆ ವ್ಯಯವಾದರೆ, ಶಿವಪಾರ್ವತಿ ಬಡಾವಣೆ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಹೆಸರಿ ಡುವ ಚರ್ಚೆ ಸುಮಾರು ಎರಡು ತಾಸು ನಡೆಯಿತು.

ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಸಭೆಯ ಆರಂಭದಲ್ಲಿಯೇ `ಆರು ತಿಂಗಳ ನಂತರ ಸಾಮಾನ್ಯ ಸಭೆ ಕರೆಯಲಾಗಿದೆ. ವಾರ್ಡ್‌ಗಳಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಶೂನ್ಯವೇಳೆಯ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡಿ’ ಎಂದು ಮಹಾಪೌರರಿಗೆ ಮನವಿ ಮಾಡಿದರು. 

ಇದಕ್ಕೆ ದನಿಗೂಡಿಸಿದ ಎ.ನಾಗರಾಜ್, ಸಭೆ ರಾತ್ರಿ 12 ಗಂಟೆ ವರೆಗೆ ಬೇಕಾದರೆ ನಡೆಯಲಿ. ಆದರೆ ಆರಂಭದಲ್ಲಿ ಅರ್ಧ ಗಂಟೆ ಶೂನ್ಯ ಅವಧಿ ಚರ್ಚೆಗೆ ಅವಕಾಶ ಕೊಡಿ. ಮೀಟಿಂಗ್ ನಡೆಸುವುದು ಮುಖ್ಯವಲ್ಲ. ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸುವುದು ಮುಖ್ಯ ಎಂದರು.

ಎಸ್.ಟಿ.ವೀರೇಶ್ ಮಾತನಾಡಿ, ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು ಹೆಚ್ಚಿವೆ. ಸೋಮವಾರ ವಿಶೇಷ ಸಭೆ ಕರೆದು ಎಲ್ಲಾ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಈಗ ಬೇಡ ಎಂದರು. ಆರಂಭದಲ್ಲಿಯೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಆರಂಭವಾಯಿತು.

ಉಮಾ ಪ್ರಕಾಶ್ ಮಾತನಾಡಿ, ಪಾಲಿಕೆ ಸದಸ್ಯರಾಗಿ ಮೂರು ವರ್ಷವಾದರೂ ವಾರ್ಡ್‌ ನಲ್ಲಿ ಒಂದು ಬೀದಿ ದೀಪ ಹಾಕಿಸಲು ಸಾಧ್ಯ ವಾಗಿಲ್ಲ. ಯುಜಿಡಿಯಿಂದ ನೀರು ಹರಿದು ಚರಂಡಿಗೆ ಸೇರಿಸುತ್ತಿದೆ. ಇದನ್ನು ಯಾರ ಬಳಿ ಕೇಳಬೇಕು ಎಂದು ಪ್ರಶ್ನಿಸಿದರು. ಅಲ್ಲದೇ ಚರ್ಚೆಗೆ ಅವಕಾಶ ನೀಡುವಂತೆ ಹೇಳಿದರು.

ಕೊನೆಗೂ ಸದಸ್ಯರ ಒತ್ತಡಕ್ಕೆ ಮಣಿದು ಸಮಸ್ಯೆಗೆಳ ಚರ್ಚೆಗೆ ಅನುಮತಿ ನೀಡಲಾಯಿತು. ಯುಜಿಡಿ ಓಪನ್ ಆಗಿ ಚರಂಡಿಗೆ ನೀರು ಹರಿಯುತ್ತಿದೆ ಎಂಬ ಉಮಾ ಪ್ರಕಾಶ್ ಅವರ ದೂರಿಗೆ 33ನೇ ವಾರ್ಡ್‌ ಸದಸ್ಯ ಕೆ.ಎಂ. ವೀರೇಶ್ ಸಹ ದನಿಗೂಡಿಸಿದರು.

ಸದಸ್ಯೆ ಮೀನಾಕ್ಷಿ ಜಗದೀಶ್, ಯುಜಿಡಿ ರಿಪೇರಿಗೆ ವಯಸ್ಸಾದವರೇ ನೇಮಕವಾಗಿದ್ದು, ಅವರಿಂದ ಕೆಲಸ ಮಾಡಲಾಗುತ್ತಿಲ್ಲ. ಜಲಸಿರಿ ಯೋಜನೆಯಡಿ ಗುಂಡಿಗಳನ್ನು ತೆಗೆದು ಹಾಗೆ ಬಿಡಲಾಗಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದರು. ಗಡಿಗುಡಾಳ್ ಮಂಜುನಾಥ್, ಚಮನ್ ಸಾಬ್ ಈ ವಿಷಯಕ್ಕೆ ದನಿಗೂಡಿಸಿ, ಜಲಸಿರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಯುಕ್ತರಾದ ರೇಣುಕಾ, ಜಲಸಿರಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ ನಿಗದಿಪಡಿಸಿ ಸಭೆ ಕರೆಯೋಣ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರ ಕೆಲಸ ಮುಗಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಮೂರು ಮನೆಗಳಿಗೆ ಒಂದು ನಲ್ಲಿ ಸಂಪರ್ಕವಿರುತ್ತದೆ. ಜಲಸಿರಿ ಯೋಜನೆಯಡಿ ಮೂರೂ ಮನೆಗಳಿಗೆ ಸಂಪರ್ಕ ಕೊಡಿ ಎಂದರೆ ಕಂದಾಯ ಕಟ್ಟಿರುವ ರಶೀದಿ ತನ್ನಿ ಎನ್ನುತ್ತೀರಿ. ನಲ್ಲಿ ಸಂಪರ್ಕ ಕೊಡದಿದ್ದರೆ ಪಾಲಿಕೆಗೆ ನಷ್ಟವಲ್ಲವೇ? ಎಂದು ಅಬ್ದುಲ್ ಲತೀಫ್ ಪ್ರಶ್ನಿಸಿದರು. ಎಂಜಿನಿಯರ್ ರವಿ ಮಾತನಾಡಿ, ಈ ರೀತಿ ನಲ್ಲಿ ಸಂಪರ್ಕಬೇಕಾದ ಮನೆಗಳ ಸರ್ವೇ ಮಾಡಿಸಲಾಗುವುದು ಎಂದರು.

ಎ.ನಾಗರಾಜ್, ಕಳೆದ ಆರು ತಿಂಗಳಿನಿಂದ ಒಂದೂ ಟೆಂಡರ್ ಕರೆದಿಲ್ಲ. ಯುಜಿಡಿ ಸಮಸ್ಯೆ ಹೆಚ್ಚಾಗಿದೆ. ಶೀಘ್ರ ಟೆಂಡರ್ ಕರೆದು ಸರಿಪಡಿಸಿ ಎಂದರು.

ಪಾಲಿಕೆಯ 340 ಮಳಿಗೆಗಳ ಕರಾರು ಅವಧಿ ಮುಗಿದಿದ್ದು, ಕಳೆದ 25 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರಿಗೆ ಆದ್ಯತೆ ನೀಡುವಂತೆ  ಎ.ನಾಗರಾಜ್ ಹೇಳಿದರು.

ಸೋಗಿ ಶಾಂತಕುಮಾರ್ ಮರು ಹರಾಜು ಸೂಕ್ತ ಎಂದು ಹೇಳಿದರು. ಚಮನ್ ಸಾಬ್, ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ನಷ್ಟವಾಗಿದ್ದು, ರಿಯಾಯಿತಿ ಕೊಡಿ ಎಂದರು. ಎಸ್.ಟಿ. ವೀರೇಶ್, ಅನೇಕರು ಮಳಿಗೆ ಪಡೆದು ಹೆಚ್ಚಿನ ಹಣಕ್ಕೆ ಸಬ್ ಲೀಸ್‌ ನೀಡಿದ್ದಾರೆ. ಅದಕ್ಕೆ ಕಡಿವಾಣ ಹಾಕಲಿ ಎಂದರು.

ಫ್ಲೆಕ್ಸ್‌ ಕಡಿವಾಣಕ್ಕೆ ಒತ್ತಾಯ: ಸದಸ್ಯ ಎ.ನಾಗರಾಜ್, ಊರು ತುಂಬೆಲ್ಲಾ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕುವಂತೆ ಕೋರಿದರು. ಎಸ್.ಟಿ. ವೀರೇಶ್ ದನಿಗೂಡಿಸಿ, ಈ ಕುರಿತು ಗಂಭೀರ ಚರ್ಚೆಯಾಗಲಿ ಎಂದರು.

ಆಯುಕ್ತೆ ರೇಣುಕಾ, ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಕೆಯಿಂದ ಅಪಘಾತಗಳು ಹೆಚ್ಚಾಗು ತ್ತಿವೆ. ಆದ್ದರಿಂದ ಪ್ರತ್ಯೇಕ ಸಭೆ ಕರೆದು ಪ್ರತ್ಯೇಕ ಮಾರ್ಗಸೂಚಿ ತಯಾರಿಸೋಣ ಎಂದರು.

ಇ-ಆಸ್ತಿ ಸರಳೀಕರಣಕ್ಕೆ ಮನವಿ: ಇ-ಆಸ್ತಿ ಮಾಡಿಸುವ ಬಗೆಯನ್ನು ಸರಳೀಕರಣ ಮಾಡು ವಂತೆಯೂ, ವಲಯ ಅಧಿಕಾರಿಗಳಿಗೆ ಕಡಿವಾಣ ಹಾಕುವಂತೆಯೂ ಎ.ನಾಗರಾಜ್ ಹೇಳಿದರು.

ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಇ-ಸ್ವತ್ತು ಮಾಡಲು ಅಧಿಕಾರಿಗಳಿಗೆ ಗಡುವು ನೀಡುವುದು ಉತ್ತಮ ಎಂದರು.

ಆಯುಕ್ತೆ ರೇಣುಕಾ, ಈಗಾಗಲೇ 15 ಕಂಪ್ಯೂಟರ್ ಹಾಗೂ 15 ಜನ ಆಪರೇಟರ್‌ಗಳನ್ನು ನೇಮಿಸಿದ್ದು,  ಲಾಗಿನ್ ಸಮಸ್ಯೆ ಪರಿಹರಿಸಿಕೊಂಡು ಶೀಘ್ರವೇ ಮುಗಿಸುವುದಾಗಿ ಹೇಳಿದರು.

ಮರ ಕಡಿತಲೆಗೆ ಪರವಾನಗಿ ನೀಡಲು ನಿರ್ಲಕ್ಷ್ಯ: ಮರ ಕಡಿಯಲು ಅರಣ್ಯ ಇಲಾಖೆ ಯವರು ವರ್ಷವಾದರೂ ಪರವಾನಗಿ ನೀಡು ವುದಿಲ್ಲ ಎಂದು ಗಡಿ ಗುಡಾಳ್ ಮಂಜುನಾಥ್ ಆರೋಪಿಸಿದರು. ಮಾಜಿ ಮೇಯರ್ ಅಜಯ್ ಕುಮಾರ್ ದನಿಗೂಡಿಸಿ, 6 ತಿಂಗಳಾ ದರೂ ಒಂದು ಮರ ತೆಗೆಸಲು ಸಾಧ್ಯವಾಗಿಲ್ಲ. ಜನ ನಮ್ಮನ್ನು ಕೇಳುತ್ತಿದ್ದಾರೆ ಎಂದರು.

ಈ ಹಿಂದೆ ಪಾಲಿಕೆಯಿಂದಲೇ ಹರಾಜು ಮೂಲಕ ಮರ ಕಡಿಯಲು ಅನುಮತಿ ನೀಡಲಾಗುತ್ತಿತ್ತು. 2 ವರ್ಷ ಪಾಲಿಕೆಯಿಂದ ಹರಾಜಿನ ಹಣ ನೀಡದ ಕಾರಣ ಆಡಿಟ್ ವೇಳೆ ಸಮಸ್ಯೆಯಾಗಿತ್ತು. ಆಗ ಮತ್ತೆ ಅರಣ್ಯ ಇಲಾಖೆಯೇ ಅನುಮತಿ ನೀಡುವಂತಾಗಿತ್ತು ಎಂದರು. ಮರದಿಂದ ಸಿಗುವ ಆದಾಯ ಕಡಿಮೆ, ಖರ್ಚು ಹೆಚ್ಚು. ಈ ಹಿನ್ನೆಲೆಯಲ್ಲಿ ಟೆಂಡರ್‌ನಲ್ಲಿ ಯಾರೂ ಭಾಗವಹಿಸುತ್ತಿಲ್ಲ ಎಂದರು.

ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪ ಮೇಯರ್ ಗಾಯತ್ರಿ ಬಾಯಿ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು  ಭಾಗವಹಿಸಿದ್ದರು.

error: Content is protected !!