ಮಲೇಬೆನ್ನೂರು, ಫೆ.9- ಸಮಾಜದಲ್ಲಿ ಎಲ್ಲರೂ ತಲೆ ಎತ್ತಿ ಬಾಳುವಂತಹ ಸಮಾನತೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಔದ್ಯೋಗಿಕ ಮೀಸಲಾತಿಗಿಂತ ಧಾರ್ಮಿಕ ಸಮಾನತೆ ಅನುಷ್ಠಾನವಾಗಬೇಕೆಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.
ಅವರು ಗುರುವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ 5ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ನೂತನ ರಥವನ್ನು ಲೋಕಾರ್ಪಣೆಗೊಳಿಸಿ, ನಂತರ ಧರ್ಮಸಭೆ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಸಮಾಜದಲ್ಲಿ ಮೇಲ್ವರ್ಗ-ಕೆಳವರ್ಗ ಎಂಬ ಭೇದ ಭಾವ ಇರುವುದು ನಿಜ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 100 ವರ್ಷಗಳ ಹಿಂದೆ ಮೈಸೂರಿನ ಮಹಾರಾಜರ ಆಡಳಿತದಲ್ಲಿ ಸಿರಿಗೆರೆ ಮಠದ ಶಿಷ್ಯ ಬಸವಯ್ಯನವರು ಮಹಾರಾಜರ ಜೊತೆ ಜಗಳವಾಡಿ ಮಿಲ್ಲರ್ ಕಮಿಟಿ ರಚಿಸಿ, ಹಿಂದುಳಿದವರಿಗೆ ಮೀಸಲಾತಿ ಕೊಡಿಸಿದ್ದರು. ಇದಕ್ಕೂ ಮುನ್ನ ನಮ್ಮ ಮಠದ ಮೂಲ ಪುರುಷ ಮರುಳಸಿದ್ದರು ಎಲ್ಲಾ ಸಮಾಜದ ಜನರನ್ನು ಜೊತೆಗೆ ಕೂಳ್ಳಿರಿಸಿಕೊಂಡು ಪ್ರಸಾದ ಸ್ವೀಕರಿಸುತ್ತಿದ್ದರು.
ಹಿರಿಯ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳು ಕೂಡ ಸ್ವಾತಂತ್ರ್ಯ ಪೂರ್ವದಲ್ಲಿ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದು ಅಲ್ಲಿ ಎಲ್ಲಾ ವರ್ಗಗಳ ಮಕ್ಕಳಿಗೂ ಉಚಿತ ಶಿಕ್ಷಣ ನೀಡಿದ್ದರು.
ಸಮ ಸಮಾಜದ ಮೂಲ ವ್ಯವಸ್ಥೆಯನ್ನು ಹುಟ್ಟು ಹಾಕಿ, ಸಾಮಾಜಿಕ ಸಮಾನತೆ ಒದಗಿಸಿಕೊಟ್ಟ ಮೊಟ್ಟಮೊದಲ ವ್ಯಕ್ತಿ ಬಸವಣ್ಣನವರಾಗಿದ್ದಾರೆ. ಇಂತಹ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಒಂದೇ ಎಂಬ ಭಾವ ಬರಬೇಕು. ಶೂದ್ರರನ್ನು ಕಾಲಿಗೆ ಹೋಲಿಸಿದ್ದಾರೆಂದು ಯಾರೂ ತಪ್ಪು ತಿಳಿದುಕೊಳ್ಳಬೇಡಿ. ಎಲ್ಲರೂ ಕಾಲಿಗೆ ಬೀಳುತ್ತಾರೆಯೇ ಹೊರತು ತಲೆಗಲ್ಲ. ಮಡಿಕೆಯ ಮೇಲೆ ಮಡಿಕೆಗಳನ್ನು ಇಟ್ಟಾಗ ಮೇಲಿನ ಮಡಿಕೆ ಭದ್ರವಾಗಿ ನಿಲ್ಲಬೇಕೆಂದರೆ ಕೆಳಗಿನ ಮಡಿಕೆ ಚೆನ್ನಾಗಿರಬೇಕು. ಹಾಗೆಯೇ ನಾವು ಕೆಳವರ್ಗದವರನ್ನು ಪ್ರೀತಿಯಿಂದ, ಸಮಾನತೆಯಿಂದ ನೋಡಿಕೊಂಡರೆ ಮೇಲ್ವರ್ಗದವರು ಉಳಿಯಲು ಸಾಧ್ಯ ಎಂದು ಸಿರಿಗೆರೆ ಸ್ವಾಮೀಜಿ ಎಚ್ಚರಿಸಿದರು.
ಶೋಷಿತ ಜನರನ್ನು ಪೋಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರೂ ತಾಯಿಯ ಹೊಟ್ಟೆಯಿಂದಲೇ ಹುಟ್ಟಿ ಬಂದಿದ್ದೇವೆ. ಮಠಾಧೀಶರಾದ ನಾವೆಲ್ಲರೂ ಒಂದೇ. ದಲಿತ ಮಠಾಧೀಶರು – ಮೇಲ್ವರ್ಗದ ಮಠಾಧೀಶರು ಎಂಬ ಭೇದ – ಭಾವ ಬೇಡ. ನಾವೆಲ್ಲರೂ ಒಂದಾಗಿ ಬಸವಣ್ಣನವರಂತೆ ಆದರ್ಶಪ್ರಾಯ ಸಮಾಜವನ್ನು ನಿರ್ಮಿಸಲು ಶ್ರಮಿಸೋಣ ಎಂದು ಸ್ವಾಮೀಜಿ ಹೇಳಿದರು.
ಎಚ್ಚರ ವಹಿಸಿ : ಮೇಲ್ವರ್ಗದ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಕೆಳ ವರ್ಗದವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿದ ಸಿರಿಗೆರೆ ಶ್ರೀಗಳು, ಜಾತಿ ನಿಂದನೆ ಕೇಸು ಕೂಡ ದುರ್ಬಳಕೆ ಆಗಬಾರದೆಂದರು.
ದೊಡ್ಡ ರಥ : ಶ್ರೀಮಠದಲ್ಲಿ ಇಂದು ಲೋಕಾರ್ಪಣೆಗೊಂಡಿರುವ 6 ಚಕ್ರದ ಅತ್ಯಾಧುನಿಕ ದೊಡ್ಡ ರಥ ಇದಾಗಿದೆ. ರಥೋತ್ಸವದಲ್ಲಿ ಎಲ್ಲಾ ಸಂಸ್ಕೃತಿ ಅನಾವರಣಗೊಂಡಿದೆ. ಭಕ್ತರು ರಥವನ್ನು ಎಳೆದರೆ, ಶ್ರೀಗಳು ಸಮಾಜದ ರಥವನ್ನು ಹೊಸ ಯಶಸ್ಸಿನಂತೆ ಎಳೆಯುತ್ತಿರುವುದು ಸಂತಸ ತಂದಿದೆ. ಕೊಟ್ಟೂರಿನಲ್ಲಿ ವಿಜೃಂಭಣೆಯಿಂದ ಎಲ್ಲಾ ಜನರೂ ಸೇರಿ ನಡೆಸಿಕೊಟ್ಟ ತರಳಬಾಳು ಹುಣ್ಣಿಮೆಯ ಬಾಸಿಂಗವನ್ನು ವಾಲ್ಮೀಕಿ ಜಾತ್ರೆಯಲ್ಲಿ ಇಳಿಸಿದ್ದೇವೆ ಎಂದು ಸಿರಿಗೆರೆ ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಡುತ್ತಿರುವ ಎಲ್ಲಾ ಹೋರಾಟಗಳಿಗೆ ರಾಜನಹಳ್ಳಿ ಶ್ರೀಗಳು ರೋಲ್ಮಾಡಲ್ ಆಗಿದ್ದಾರೆ. ಸಮುದಾಯದ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿರುವ ಶ್ರೀಗಳು ನಿಜವಾದ ಹಠಯೋಗಿಯಾಗಿದ್ದಾರೆ. ನಮ್ಮ ಪೀಠದ ಹರ ಜಾತ್ರೆಗೆ ಮುನ್ನುಡಿ ಬರೆದವರು ವಾಲ್ಮೀಕಿ ಗುರುಗಳಾಗಿದ್ದಾರೆ. ವಾಲ್ಮೀಕಿ ಜಾತ್ರೆಯ ಮಾದರಿಯಲ್ಲೇ 2 ದಿನಗಳ ಹರ ಜಾತ್ರೆಯನ್ನು ನಾವು ಪ್ರಾರಂಭಿಸಿದ್ದೇವೆ ಎಂದರು.
ಮೈಸೂರಿನ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ಜಾತ್ರೆ ಅರಿವಿನ ಜಾತ್ರೆಯಾಗಿದ್ದು, ಇಲ್ಲಿಗೆ ಬಂದಿರುವವರು ಜಾಗೃತರಾಗಿಯೇ ಮನೆಗೆ ಹೋಗಬೇಕೆಂದರು.
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಸಿರಿಗೆರೆ ಶ್ರೀಗಳು ಹೇಳಿದಂತೆ ನಾವು ಹಿಂದುಳಿದ – ದಲಿತ ಮಠಾಧೀಶರೆಂದು ಕರೆದುಕೊಳ್ಳಬೇಕೆಂಬ ಅಪೇಕ್ಷೆ ನಮ್ಮದಲ್ಲ. ಆದರೆ, ಸಮಾಜದಲ್ಲಿ ನಮ್ಮನ್ನು ಆ ರೀತಿ ಕಾಣುತ್ತಿದ್ದಾರೆ. ಈ ನಮ್ಮ ಸಂಘಟನೆ ಶೋಷಣೆಗೆ ಹೊರೆತು ವೈಯಕ್ತಿಕ ಪ್ರತಿಷ್ಠೆಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬನಶ್ರೀ ಮಠದ ಶ್ರೀ ಡಾ. ಬಸವಕುಮಾರ ಸ್ವಾಮೀಜಿ, ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಮಾಚಿದೇವ ಗುರುಪೀಠದ ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಬಸವ ಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಜೇವರ್ಗಿಯ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ಶ್ರೀಗಳ ಹೋರಾಟದ ಫಲವಾಗಿ ಎಸ್ಸಿ – ಎಸ್ಟಿ ಸಮಾಜಗಳಿಗೆ ನ್ಯಾಯ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮೀಜಿ, ಶ್ರೀ ಹಡಪದ ಅಪ್ಪಣ ಸ್ವಾಮೀಜಿ, ಶ್ರೀ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಜಾತ್ರಾ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಸ್.ವಿ.ರಾಮಚಂದ್ರ, ಸಂಚಾಲಕ ಕೆ.ಪಿ.ಪಾಲಯ್ಯ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ ವೇದಿಕೆಯಲ್ಲಿದ್ದರು.