ಮಹಿಳೆಯರ ಬಗ್ಗೆ ಇರುವ ತಾರತಮ್ಯ ಹೋಗದ ಹೊರತು, ಸದೃಢ ಭಾರತ ಸಾಧ್ಯವಿಲ್ಲ: ವರಲಕ್ಷ್ಮಿ

ಮಹಿಳೆಯರ ಬಗ್ಗೆ ಇರುವ ತಾರತಮ್ಯ ಹೋಗದ ಹೊರತು, ಸದೃಢ ಭಾರತ ಸಾಧ್ಯವಿಲ್ಲ: ವರಲಕ್ಷ್ಮಿ

ಮಲೇಬೆನ್ನೂರು, ಫೆ. 8- ದೇಶದಲ್ಲಿ ಮಹಿಳೆಯರ ಬಗ್ಗೆ ಇರುವ ತಾರತಮ್ಯ ವ್ಯವಸ್ಥೆ ಸರಿ ಹೋಗದ ಹೊರತು ಸದೃಢ ಭಾರತ ಆಗಲು ಸಾಧ್ಯವಿಲ್ಲ ಎಂದು ಸಿಐಟಿಯು ರಾಜ್ಯಾಧ್ಯಕ್ಷರಾದ ಶ್ರೀಮತಿ ವರಲಕ್ಷ್ಮಿ ಹೇಳಿದರು.

ರಾಜನಹಳ್ಳಿಯ  ವಾಲ್ಮೀಕಿ ಗುರುಪೀಠದಲ್ಲಿ ಇಂದು ಹಮ್ಮಿಕೊಂಡಿದ್ದ 5ನೇ ವರ್ಷದ  ವಾಲ್ಮೀಕಿ ಜಾತ್ರೆ ಕಾರ್ಯಕ್ರಮದಲ್ಲಿ ಸಂಘಟಿಸಿದ್ದ ಮಹಿಳಾ ಗೋಷ್ಠಿಯಲ್ಲಿ `ತಳ ಸಮುದಾಯದ ಮಹಿಳಾ ಸಬಲೀಕರಣ’ ಕುರಿತು ಅವರು ಉಪನ್ಯಾಸ ನೀಡಿದರು. 

ಕುಟುಂಬದಿಂದಲೇ ಹೆಣ್ಣು, ಗಂಡು ಎಂಬ ತಾರತಮ್ಯ ಪ್ರಾರಂಭವಾಗುತ್ತದೆ. ಹುಟ್ಟುವಾಗ, ಸಾಯುವಾಗ ಇಲ್ಲದ ಲಿಂಗಭೇದ ಬದುಕುವಾಗ ಮಾತ್ರ ಹೇಗೆ ಬರುತ್ತದೆ ಎಂದು ವರಲಕ್ಷ್ಮಿ ಪ್ರಶ್ನಿಸಿದರು.

ಅಸಮಾನತೆಯಿಂದಾಗಿ ಕೆಳವರ್ಗದ ಮಹಿಳೆಯರು ಈಗಲೂ ಅನಕ್ಷರಸ್ಥರಾಗಿದ್ದಾರೆ. ನಗರ-ಪಟ್ಟಣಗಳನ್ನು ಸ್ವಚ್ಛ ಮಾಡುವ ಕೆಲಸದಿಂದ ಹಿಡಿದು ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುವ ವರಲ್ಲಿ ಕೆಳವರ್ಗದ ಮಹಿಳೆಯರೇ ಹೆಚ್ಚಾಗಿದ್ದಾರೆ. ಇದು ಅಸಮಾನತೆಯ ಮತ್ತೊಂದು ಮುಖವಾಗಿದ್ದು, ಕೆಳವರ್ಗದರಿಗೆ ಮಾತ್ರ ಅಭದ್ರತೆಯ ಕೆಲಸ ನೀಡುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ವರಲಕ್ಷ್ಮಿ ಹೇಳಿದರು.

ರಾಜ್ಯದಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ. ಮುಟ್ಟು ಆದವರನ್ನು ಮತ್ತು ಗರ್ಭಿಣಿ ಮಹಿಳೆಯರನ್ನು ಹೆಸರಿಗೆ ಸಂದರ್ಭದಲ್ಲಿ ಮನೆಯಿಂದ ಹೊರಗೆ ಇಡುವ ಅನಿಷ್ಟ ಪದ್ಧತಿಗಳಿಂದಾಗಿ ಮಹಿಳೆಯರನ್ನು ಸುಟ್ಟು ಹಾಕಲಾಗುತ್ತದೆ ಎಂದು ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಜಿಎಸ್‌ಟಿ ಕಟ್ಟಿಸಿಕೊಳ್ಳುವ ಸರ್ಕಾರಗಳು ನಿರುದ್ಯೋಗಿಗಳಿಗೆ, ಶಕ್ತಿ ಇಲ್ಲದ ಜನರಿಗೆ ಯಾವ ಭದ್ರತೆ ನೀಡಿವೆ ಎಂದು ಪ್ರಶ್ನಿಸಿದ ಅವರು, ಅಸಾಂಪ್ರದಾಯಿಕ ವ್ಯವಸ್ಥೆ, ಆರ್ಥಿಕ ಸಬಲೀಕರಣ ಇಲ್ಲದಿರುವುದು ಕೂಡ ಕೆಳವರ್ಗದ ಮಹಿಳೆಯರು ಹಿಂದುಳಿಯಲು ಪ್ರಮುಖ ಕಾರಣವಾಗಿದೆ ಎಂದರು.

ಮಹಿಳೆಯರು ಸಬಲೀಕರಣದ ಬಗ್ಗೆ ಸರ್ಕಾರಗಳು ಬರಿ ಮಾತನಾಡಿದರೆ ಸಾಲದು, ಬದಲಿಗೆ ತಾರತಮ್ಯ ಇರುವ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. ಮಹಿಳೆಯರ ಶಿಕ್ಷಣ, ಉದ್ಯೋಗ ಮತ್ತು ಭದ್ರತೆ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ಜಾತ್ರೆಯಲ್ಲಿ ಮಹಿಳಾ ಗೋಷ್ಠಿ ಏರ್ಪಡಿಸುವ ಮೂಲಕ ಮಹಿಳೆಯರಿಗೆ ಶಕ್ತಿ ನೀಡುವ ಕೆಲಸ ಮಾಡಲಾಗಿದೆ ಎಂದು ವರಲಕ್ಷ್ಮಿಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ. ಎನ್. ನಾಗಲಾಂಬಿಕಾದೇವಿ ಮಾತನಾಡಿ, ಮಹಿಳೆಯರು ಶೈಕ್ಷಣಿಕವಾಗಿ ಸಬಲೀಕರಣವಾದಾಗ ಮಾತ್ರ ಪ್ರಗತಿ ಸಾಧ್ಯ ಎಂದರು.

ಹೆಣ್ಣು ಸಬಲೀಕರಣವಾದರೆ ಮಾತ್ರ ದೇಶದ ಸಬಲೀಕರಣ ಎಂಬದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದವರು ಕೆಳವರ್ಗದ ಮಹಿಳೆಯರೇ ಎಂಬುದನ್ನು ಯಾರೂ ಮರೆಯಬಾರದು.

ರಸ್ತೆಯಲ್ಲಿ ಡಾಂಬರೀಕಣ ಕೆಲಸ ಮಾಡುವ ಮಹಿಳೆ ಕೂಡಾ ಕೆಳವರ್ಗದವರಾಗಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ವರೂಪ ಬರಲು ಕೆಳ ಸಮುದಾಯದ ಮಹಿಳೆಯರು ಕಾರಣರಾಗಿ ದ್ದಾರೆ. ಕುಟುಂಬದಲ್ಲಿ ಮಹಿಳೆ ವಿದ್ಯಾವಂತೆ ಯಾಗಿದ್ದರೆ ಆ ಕುಟುಂಬದಲ್ಲಿ ಬದಲಾವಣೆ ನಿಶ್ಚಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಮಠಗಳು ಕೆಳವರ್ಗದ ಮಹಿಳೆಯರ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು. ಜೊತೆಗೆ ಕೆಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಬೇಕೆಂದು ನಾಗಲಾಂಬಿಕಾ ದೇವಿ ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ ಮಾತೆ ಶಬರಿ ಭಾವಚಿತ್ರ ಅನಾವರಣ ಮಾಡಿದರು. ಮಠದ ಧರ್ಮದರ್ಶಿ ಶ್ರೀಮತಿ ಶಾಂತಲಾ ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿ ಶಿವಪ್ಪ ಪೂಜಾರ್, ಕರ್ನಾಟಕ ಆದಿವಾಸಿ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಮಂಜುಶ್ರೀ, ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕರಾದ ಶ್ರೀಮತಿ ರೇವತಿರಾಜ್ ಮಾತನಾಡಿದರು.

ಲಿಂಗೈಕ್ಯ ಶ್ರೀಗಳ ತಾಯಿ ಶ್ರೀಮತಿ ಮಹಾದೇವಮ್ಮ, ಕೊರಗ ಸಮುದಾಯದ ಪ್ರಥಮ ಪಿಹೆಚ್‌ಡಿ ಪಡೆದ ವಿದ್ಯಾರ್ಥಿ ಸುಶೀಲ ಕೊರಗ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯಾಧ್ಯಕ್ಷರಾದ ರೇಣುಕಮ್ಮ, ಕಿರಿಯ ಕ್ರೀಡಾಪಟು ಹರ್ಷಿತ, ಅಂತರರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಪಟು ನೀಲವ್ವ ಮಲ್ಲಿಗವಾಡ, ರಾಷ್ಟ್ರೀಯ ಕ್ರೀಡಾಪಟು ಚನ್ನಗಿರಿಯ ಸುಜಾತ ಬಸವರಾಜ, ಸುಗಮ ಸಂಗೀತ ಕಲಾವಿದೆ ಶ್ರೀಮತಿ ಸಾವಿತ್ರಿ ಮಹಾಂತೇಶ ಲಮಾಣಿ, ದಾವಣಗೆರೆಯ ಶ್ರೀಮತಿ ವಿಜಯಶ್ರೀ ಮಹೇಂದ್ರಕುಮಾರ್, ಹರಿಹರದ ಶ್ರೀಮತಿ ಪಾರ್ವತಿ ಬೋರಯ್ಯ, ರಾಜನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಲಂಕೇಶ್, ಶ್ರೀಮತಿ ಗೌರಮ್ಮ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. 

ಸಂಸದ ಅರಸೀಕೆರೆ ದೇವೇಂದ್ರಪ್ಪ,  ಶಾಸಕ ಎಸ್. ರಾಮಪ್ಪ, ಜಾತ್ರಾ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಪಿ.ಬಿ. ಹರೀಶ್, ಜಾತ್ರಾ ಸಮಿತಿ ಸಂಚಾಲಕ ಕೆ.ಪಿ. ಪಾಲಯ್ಯ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ, ಜಿ.ಪಂ. ಮಾಜಿ ಸದಸ್ಯರಾದ ಹೊದಿಗೆರೆ ರಮೇಶ್, ಎಂ. ನಾಗೇಂದ್ರಪ್ಪ, ತ್ಯಾವಣಿಗೆ ಗೋವಿಂದಸ್ವಾಮಿ, ಲೋಕೇಶ್ವರಪ್ಪ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಧರ್ಮದರ್ಶಿ ಕೆ.ಬಿ. ಮಂಜುನಾಥ್, ತಾ.ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ದಾವಣಗೆರೆ ತಾ.ಪಂ. ಮಾಜಿ ಅಧ್ಯಕ್ಷ ಕುಕ್ಕುವಾಡ ಮಂಜುನಾಥ್, ಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಹರ್ತಿಕೋಟೆ ವೀರೇಂದ್ರ ಸಿಂಹ, ಡಾ. ಎ.ಬಿ. ರಾಮಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಶ್ರೀದೇವಿ ಬೆಳವಡಿ ನಿರೂಪಿಸಿ, ವಂದಿಸಿದರು. ಬಳ್ಳಾರಿ ಅವಂತಿಕ, ದಾವಣಗೆರೆಯ ಸ್ಫೂರ್ತಿ ಅವರ ನೃತ್ಯ ಎಲ್ಲರ ಗಮನ ಸೆಳೆಯಿತು.

error: Content is protected !!