ಹರಿಹರ, ಫೆ. 6 – ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲವಾಗಿದೆ ಎಂದು ಎ.ಐ.ಸಿ.ಸಿ.ಯ ಚುನಾವಣಾ ವೀಕ್ಷಕಿ ಪ್ರಣತಿ ಶಿಂಧೆ ತಿಳಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆಸಲಾದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಹರಿಹರದಲ್ಲಿ ಕಾಂಗ್ರೆಸ್ ಅಡಿಪಾಯ ಬಲಿಷ್ಠ ವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ತರುವ ಆತ್ಮವಿಶ್ವಾಸ ಇರಬೇಕು. ಮುಖಂಡರು ಗೊಂದಲ ಮಾಡಿ ಕೊಂಡರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದವರು ಹೇಳಿದರು.
ಚುನಾವಣೆ ಹತ್ತಿರದಲ್ಲೇ ಇದೆ. ಆಡಳಿತಾರೂಢ ಸರ್ಕಾರಗಳು ಮಾಡಿರುವ ತೊಂದರೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಹರಿಹರ ತಾಲ್ಲೂಕಿನಲ್ಲಿ ಕೃಷಿ ಹಾಗೂ ಕೈಗಾರಿಕೆಗಳಿಗೆ ಆಗಿರುವ ಹಿನ್ನಡೆ ಬಗ್ಗೆ ತಿಳಿಸಬೇಕು. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಆ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಮಾತಿನ ಚಕಮಕಿ
ಹರಿಹರ, ಫೆ. 6- ಚುನಾವಣೆ ಹಿನ್ನೆಲೆಯಲ್ಲಿ ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆಸಲಾದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಎ.ಐ.ಸಿ.ಸಿ. ವೀಕ್ಷಕರ ಎದುರೇ ಮಾತಿನ ಚಕಮಕಿ ನಡೆದಿದೆ.
ಎ.ಐ.ಸಿ.ಸಿ. ವೀಕ್ಷಕಿ ಪ್ರಣತಿ ಶಿಂಧೆ ಅವರು ಉಪಸ್ಥಿತರಿದ್ದ ಸಭೆಯಲ್ಲಿ ಮಲೇಬೆನ್ನೂರಿನ ಮುಖಂಡ ಸೈಯದ್ ಜಾಕೀರ್ ಎಂಬುವವರು ಮಾತನಾಡಲು ಅವಕಾಶ ಕೇಳಿದರು. ಆದರೆ, ವೀಕ್ಷಕರು ಹೊನ್ನಾಳಿ ನಗರಕ್ಕೆ ತೆರಳಬೇಕಿರುವು ದರಿಂದ ಶಾಸಕ ಎಸ್. ರಾಮಪ್ಪ ಅವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಲಾಯಿತು. ಪಕ್ಷದ ಸಮಸ್ಯೆಗಳನ್ನು ಸರಿಪಡಿ ಸುವ ಬಗ್ಗೆ ಮಾತನಾಡಬೇಕಿತ್ತು. ಅವಕಾಶ ನೀಡದೇ ಇದ್ದರೆ ಯಾಕೆ ಕರೆಸಬೇಕಿತ್ತು? ಎಂದು ಜಾಕೀರ್ ಪ್ರಶ್ನಿಸಿದರು. ಜಾಕೀರ್ ಸಭೆಯಿಂದ ಹೊರ ನಡೆದಾಗ, ಪಕ್ಷದ ಹಿರಿಯರು ಅವರನ್ನು ವಾಪಸ್ ಕರೆ ತಂದರು.
ಆಗ ಮಧ್ಯ ಪ್ರವೇಶಿಸಿದ ವೀಕ್ಷಕಿ ಪ್ರಣತಿ ಶಿಂಧೆ, ಕ್ಷೇತ್ರದಲ್ಲಿ ಸಾಕಷ್ಟು ಆಕಾಂಕ್ಷಿತರು ಇರಬಹುದು. ಎಲ್ಲರನ್ನೂ ಪ್ರತ್ಯೇಕವಾಗಿ ಕರೆದು ಮಾತನಾಡಿ ಎ.ಐ.ಸಿ.ಸಿ.ಗೆ ವರದಿ ಕಳಿಸಲಾಗುವುದು. ಯಾರೂ ಗೊಂದಲ ಮಾಡಿಕೊಳ್ಳಬಾರದು ಎಂದು ಸಮಾಧಾನ ಪಡಿಸಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಬಲವಾಗಿದೆ. ಎಲ್ಲ ವರ್ಗದವರೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಸೈಯದ್ ಜಾಕೀರ್ ಮಲೇಬೆನ್ನೂರು ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಸಂಘಟನೆ ಬಲಪಡಿಸಬೇಕಿದೆ. ಸಂಘಟನೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ, ನಂತರ ಅಭ್ಯರ್ಥಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆ ನಂತರ ಪ್ರಣತಿ ಶಿಂಧೆ ಅವರು ಟಿಕೆಟ್ ಆಕಾಂಕ್ಷಿಗಳ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಮಾಹಿತಿ ಪಡೆದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಿಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ರೋಷನ್, ಕೆಪಿಸಿಸಿ ಸದಸ್ಯ ಕೆ. ರೇವಣಸಿದ್ದಪ್ಪ, ನಂದಿಗಾವಿ ಎನ್.ಹೆಚ್. ಶ್ರೀನಿವಾಸ್, ಕೃಷ್ಣಸಾ ಭೂತೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಬಾಬುಲಾಲ್ ಮತ್ತಿತರರು ಉಪಸ್ಥಿತರಿದ್ದರು.